Home Crime ಕಬ್ಬಿಣದ ಕಪಾಟು ಮೈಮೇಲೆ ಬಿದ್ದು ವ್ಯಕ್ತಿ ದುರ್ಮರಣ…!!

ಕಬ್ಬಿಣದ ಕಪಾಟು ಮೈಮೇಲೆ ಬಿದ್ದು ವ್ಯಕ್ತಿ ದುರ್ಮರಣ…!!

ಉಡುಪಿ, ಜೂ. 19: ಉಡುಪಿಯ ಸಂತೆಕಟ್ಟೆಯ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಕಬ್ಬಿಣದ ಕಪಾಟು ಮೈಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ವಿಲ್ಫ್ರೆಡ್ ಎ. ರೋಡ್ರಿಗಸ್ (64) ಎಂದು ಗುರುತಿಸಲಾಗಿದೆ. ಅವರು ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸಂತೆಕಟ್ಟೆಯ ಮೀನು ಮಾರುಕಟ್ಟೆ ಹಿಂಭಾಗದಲ್ಲಿರುವ G.I.S. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 507ರಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಮೃತರು ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಈ ಹಿಂದೆ ಮದ್ಯದ ಅಮಲಿನಲ್ಲಿ ಬಿದ್ದು ಮೂಳೆ ಮುರಿದು ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ವಾಕರ್ ಸಹಾಯದಿಂದ ಓಡಾಡುತ್ತಿದ್ದರು.

ಜೂನ್ 16ರಂದು ಮೃತರ ಸಹೋದರಿ ಟ್ರೇಸ ಮಾರ್ತ ಕ್ರಾಸ್ತ ಅವರು ದೂರವಾಣಿ ಮೂಲಕ ಯೋಗಕ್ಷೇಮ ವಿಚಾರಿಸಿದ್ದರು. ಬಳಿಕ ಜೂನ್ 18ರಂದು ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅವರು ಅಪಾರ್ಟ್‌ಮೆಂಟ್‌ಗೆ ಆಗಮಿಸಿ ಬಾಗಿಲು ತಟ್ಟಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ, ಬೆಡ್‌ರೂಮ್‌ನಲ್ಲಿ ವಿಲ್ಫ್ರೆಡ್ ಎ. ರೋಡ್ರಿಗಸ್ ಅವರ ಮೈಮೇಲೆ ಕಬ್ಬಿಣದ ಕಪಾಟು ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮದ್ಯದ ಅಮಲಿನಲ್ಲಿ ಕಪಾಟಿನಲ್ಲಿದ್ದ ಯಾವುದೋ ವಸ್ತುವನ್ನು ತೆಗೆಯಲು ಯತ್ನಿಸಿದ ವೇಳೆ ಕಬ್ಬಿಣದ ಕಪಾಟು ಅವರ ಮೇಲೆ ಬಿದ್ದು ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 39/2026ರಡಿ ಬಿಎನ್‌ಎಸ್‌ಎಸ್ ಕಲಂ 194 ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.