ಬ್ರಹ್ಮಾವರ : ತಾಯಿಯ ಆರೈಕೆಗೆ ನೇಮಕಗೊಂಡಿದ್ದ ಮನೆ ಕೆಲಸದಾಕೆಯೇ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಅಡವಿಟ್ಟು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವದ ಹೇರೂರಿನಲ್ಲಿ ನಡೆದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇರೂರಿನ ನಿವಾಸಿ ಆಶಾ ಅವರ ತಾಯಿಯ ಮೊಣಕಾಲಿಗೆ ಗಾಯವಾಗಿ (ಫ್ರ್ಯಾಕ್ಚರ್) ಹಾಸಿಗೆ ಹಿಡಿದಿದ್ದರು. ಅವರ ಆರೈಕೆಯನ್ನು ನೋಡಿಕೊಳ್ಳಲು 2026ರ ಮಾರ್ಚ್ ತಿಂಗಳ ಆರಂಭದಲ್ಲಿ ಆರೂರು ನಿವಾಸಿಯಾದ ಲತಾ ಎಂಬಾಕೆಯನ್ನು ಮನೆಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು.
ಎಪ್ರಿಲ್ 1 ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಆಶಾ ಅವರ ತಂದೆ ಮನೆಯ ಕಪಾಟಿನಲ್ಲಿದ್ದ ತಮ್ಮ ಚಿನ್ನಾಭರಣಗಳನ್ನು ತೆಗೆದುಕೊಳ್ಳಲು ತೆರಳಿದ್ದರು. ಆದರೆ ಕಪಾಟಿನಲ್ಲಿಟ್ಟಿದ್ದ 25 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟ್ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾಗಿರುವುದು ಪತ್ತೆಯಾಗಿದೆ.
ತಕ್ಷಣವೇ ಆಶಾ ಅವರು ಮನೆಯಲ್ಲಿದ್ದ ಕೆಲಸದಾಕೆ ಲತಾಳನ್ನು ವಿಚಾರಿಸಿದಾಗ, ಆಕೆ ತಾನೇ ಚಿನ್ನವನ್ನು ತೆಗೆದುಕೊಂಡು ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ತಾನೇ ಸ್ವತಃ ಆ ಚಿನ್ನವನ್ನು ಬಿಡಿಸಿ ಕೊಡುವುದಾಗಿ ಭರವಸೆ ನೀಡಿ ನಂಬಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಶಾ ಅವರು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ.
ಆದರೆ ದಿನ ಕಳೆದಂತೆ ಲತಾ ಚಿನ್ನವನ್ನು ಬಿಡಿಸಿಕೊಡದೆ, ಇದೀಗ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾಳೆ. ಇದರಿಂದ ಮೋಸ ಹೋಗಿರುವುದನ್ನು ಅರಿತ ಆಶಾ ಅವರು ತಡವಾಗಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.




