Home Crime ಬೆಳಗಾವಿ : ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ಮೃತ್ಯು…!!

ಬೆಳಗಾವಿ : ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ಮೃತ್ಯು…!!

ಬೆಳಗಾವಿ: ಇಲ್ಲಿನ ಪ್ರಸಿದ್ಧ ಕಪಿಲೇಶ್ವರ ದೇವಾಲಯದ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ರವಿವಾರ (ಮೇ 3) ನಡೆದಿದೆ.

ಬೇಸಗೆ ರಜೆಯ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಈ ದುರಂತವು ಮಡುಗಟ್ಟಿದ ಶೋಕವನ್ನು ತಂದಿಟ್ಟಿದೆ.

​ಮೃತರನ್ನು ಶಿವಂ ಪರಶುರಾಮ ಸುಂಡೀಕರ್ (7) ಮತ್ತು ಪರಶುರಾಮ ನಿಲಜಕರ್ (11) ಎಂದು ಗುರುತಿಸಲಾಗಿದೆ.

ರವಿವಾರ ಬೆಳ್ಳಂಬೆಳಗ್ಗೆ ಶಾಲೆಗೆ ರಜೆ ಇದ್ದ ಕಾರಣ ಈ ಇಬ್ಬರು ಬಾಲಕರು ನಗರದ ಕಪಿಲೇಶ್ವರ ದೇವಸ್ಥಾನದ ಸಮೀಪವಿರುವ ಹೊಂಡಕ್ಕೆ ಈಜಲೆಂದು ತೆರಳಿದ್ದರು. ಈ ವೇಳೆ ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಬಾಲಕರು ಈಜಲಾಗದೆ ನೀರಿನಲ್ಲಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.​

ಘಟನೆ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೊಂಡದಲ್ಲಿ ಶೋಧ ಕಾರ್ಯ ನಡೆಸಿದರು. ತೀವ್ರ ಕಾರ್ಯಾಚರಣೆಯ ನಂತರ ಇಬ್ಬರೂ ಬಾಲಕರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಗಿದೆ.​ ಮಕ್ಕಳು ಆಟವಾಡುತ್ತಾ ಈಜಲು ತೆರಳಿದ್ದರು, ಆದರೆ ನೀರಿನ ಹರಿವು ಮತ್ತು ಆಳದ ಅಂದಾಜು ಸಿಗದೆ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.​

​ವಿಷಯ ತಿಳಿದ ತಕ್ಷಣ ಖಡೇಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.​ನೆಚ್ಚಿನ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು. ಬೇಸಗೆಯ ಈ ಸಮಯದಲ್ಲಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.