ಕಾರ್ಕಳ : ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಪ್ರದೇಶದಲ್ಲಿ ನಡೆದ ಕುಟುಂಬದ ಒಳಗಿನ ಜಾಗ-ಮನೆ ತಕರಾರು ಕೊನೆಗೆ ಕೊಲೆಯಲ್ಲಿ ರಕ್ತಸಿಕ್ತವಾಗಿ ಅಂತ್ಯ ಕಂಡಿದೆ.
ರಿಚರ್ಡ್ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್ ಡಿಸೋಜರ ನಡುವೆ ಮನೆ ಹಾಗೂ ಜಾಗದ ವಿಚಾರವಾಗಿ ಕೆಲಕಾಲದಿಂದ ವಿವಾದ ನಡೆಯುತ್ತಿತ್ತು. ಇದೇ ವಿಷಯಕ್ಕೆ ಸಂಬಂಧಿಸಿ ಮಿತ್ತಬೆಟ್ಟು ಹಿರಿಯಂಗಡಿ ಪ್ರದೇಶದಲ್ಲಿರುವ ಜಾಗದಲ್ಲಿ ಇಬ್ಬರ ನಡುವೆ ಗಲಾಟೆ ಸಂಭವಿಸಿದೆ.
ಈ ವೇಳೆ ಆರೋಪಿ ಹೆರಾಲ್ಡ್ ಡಿಸೋಜ ಮರದ ರೀಪು ಅಥವಾ ಯಾವುದೋ ಆಯುಧದಿಂದ ರಿಚರ್ಡ್ ಡಿಸೋಜರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವುದಾಗಿ ಮೃತರ ಪತ್ನಿ ಜೆಸಿಂತ ಡಿಸೋಜ ಅವರು 03-05-2026 ರಂದು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2026ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಹೆರಾಲ್ಡ್ ಡಿಸೋಜನನ್ನು ಡಿವೈಎಸ್‌ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಅಜ್ಮತ್ ಆಲಿ ಹಾಗೂ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





