ಉಡುಪಿ: ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ (ಶ್ರೇಷ್ಠಗುರು) ಆಗಿ ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರನ್ನು ನೇಮಕಗೊಳಿಸಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಆದೇಶ ಹೊರಡಿಸಿದ್ದಾರೆ.
ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರು ಪ್ರಸ್ತುತ ಕಲತ್ತೂರು ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇ 2 ರ ಶನಿವಾರ ಬಿಷಪ್ ಹೌಸ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ, ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹುದ್ದೆಯನ್ನು ಸ್ವೀಕರಿಸಿದರು.
ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಪ್ರಾರ್ಥನಾ ಸಭೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ಟೀಫನ್ ಡಿಸೋಜಾ, ಕಾಲೇಜ್ ಆಫ್ ಕನ್ಸಲ್ಟರ್ಸ್ ಸದಸ್ಯರು, ವಂ. ಜಿತೇಶ್ ಕ್ಯಾಸ್ಟೆಲಿನೋ ಮತ್ತು ಪ್ರೊಕ್ಯುರೇಟರ್ ಮಾರ್ಸೆಲ್ ಡಿಸೋಜಾ ಉಪಸ್ಥಿತರಿದ್ದರು.
ವಂ. ಫ್ರಾನ್ಸಿಸ್ ಝೇವಿಯರ್ ಲೂವಿಸ್ ಶಿರ್ವ ಸಮೀಪದ ಪೆರ್ನಾಲ್ ಚರ್ಚಿನವರಾಗಿದ್ದು ದಿ. ಜಾನ್ ಲೂವಿಸ್ ಮತ್ತು ತೆರೆಸಾ ಲೂವಿಸ್ ದಂಪತಿಗಳ ಪುತ್ರರಾಗಿದ್ದಾರೆ. ಇವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಕಿರಿಯ ಸಹೋದರಿ ಇದ್ದಾರೆ. ಯಾಜಕ ವೃತ್ತಿಯ ಕರೆಯನ್ನು ಸ್ವೀಕರಿಸಿ, ಅವರು 30 ಜೂನ್ 1976 ರಂದು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿಯಲ್ಲಿ ಸೇರಿ, 28 ಏಪ್ರಿಲ್ 1987 ರಂದು ಯಾಜಕರಾಗಿ ಅಭಿಷೇಕಗೊಂಡರು.
ಕಳೆದ 39 ವರ್ಷಗಳ ಸಮರ್ಪಿತ ಯಾಜಕ ಸೇವೆಯಲ್ಲಿ, ಫ್ರಾನ್ಸಿಸ್ ಅವರು ಧರ್ಮಪ್ರಾಂತ್ಯದ ವಿವಿಧ ಧಾರ್ಮಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. 1987ರಿಂದ 1997ರವರೆಗೆ ಬೀದರ ಮಿಷನ್ನಲ್ಲಿ ಮಿಷನರಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿ, ಬೀದರ, ಭಾಲ್ಕಿ, ಜಲಸಂಗಿ-ಹುಮನಾಬಾದ್ ಹಾಗೂ ಬಸವ ಕಲ್ಯಾಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ನಂತರ 1997ರಿಂದ 2004ರವರೆಗೆ ಮಂಗಳೂರು ಬಜಾಲ್ನ ಹೋಲಿ ಸ್ಪಿರಿಟ್ ಚರ್ಚ್ನಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿದರು.
2004ರಿಂದ 2006ರವರೆಗೆ ಕೆನಾರಾ ಕಮ್ಯುನಿಕೇಶನ್ ಸೆಂಟರ್ ಹಾಗೂ ವೋಕೇಶನ್ ಸರ್ವಿಸ್ ಸೆಂಟರ್ ನಿರ್ದೇಶಕರಾಗಿ, 2006ರಿಂದ 2008ರವರೆಗೆ ಸಂಡೇಶ – ಕರ್ನಾಟಕ ಪ್ರಾದೇಶಿಕ ಸಂವಹನ ಕೇಂದ್ರದ ನಿರ್ದೇಶಕರಾಗಿ ಹಾಗೂ 2004ರಿಂದ 2008ರವರೆಗೆ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಹತ್ವದ ಕೊಡುಗೆ ನೀಡಿದ್ದಾರೆ.
2008ರಿಂದ 2016ರವರೆಗೆ ಮಣಿಪಾಲದ ಕ್ರೈಸ್ಟ್ ಚರ್ಚ್ನಲ್ಲಿ, 2016ರಿಂದ 2022ರವರೆಗೆ ಮುದರಂಗಡಿ ಸೇಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. 2022ರಿಂದ 2026ರವರೆಗೆ ಕಲತ್ತೂರು ಅವರ್ ಲೇಡಿ ಆಫ್ ಪರ್ಪೆಚುವಲ್ ಸೆಕ್ಯೂರ್ ಚರ್ಚ್ನಲ್ಲಿ ಸೇವೆ ಸಲ್ಲಿಸಿದರು.
ಇವರನ್ನು 18 ಮೇ 2026ರಿಂದ ಜಾರಿಗೆ ಬರುವಂತೆ ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನಾಲಯದ ರೆಕ್ಟರ್ ಹಾಗೂ ಧರ್ಮಗುರುಗಳಾಗಿ ಅದರೊಂದಿಗೆ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಕೂಡ ನೇಮಕ ಮಾಡಲಾಗಿದೆ.





