ಉಡುಪಿ: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಅಪರೂಪದಲ್ಲಿ ಅಪರೂಪವಾದ ಮಹಾ ರುದ್ರಯಾಗ ಮೇ 14ರಿಂದ 19ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ದೇವಸ್ಥಾನದ ಪರಮ ಭಕ್ತರಾದ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ, ಲೋಕ ಕಲ್ಯಾಣ ಮತ್ತು ನಾಡಿನ ಜನರ ಸುಭಿಕ್ಷೆಗಾಗಿ ಈ ಮಹಾಯಾಗವನ್ನು ಆಯೋಜಿಸಲಾಗಿದೆ.
ಈ ಮಹೋತ್ಸವದ ಅಂಗವಾಗಿ ಮೇ 10ರಿಂದ 20ರವರೆಗೆ ಕೊಡವೂರಿನಲ್ಲಿ ನಾಡ ಹಬ್ಬದಂತೆಯೇ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನರ ಮನರಂಜನೆಗಾಗಿ ಆಟಿಕೆಗಳು, ಮೇಳಗಳು, ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಸಿದ್ಧವಾಗಿವೆ.
ಮೇ 14ರಂದು ಮಲ್ಪೆಯಿಂದ ಕೊಡವೂರಿನ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮೇ 15ರಂದು ಮಹಾ ರುದ್ರಯಾಗ ಮತ್ತು ಗಣ ಯಾಗದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಸಂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಮೇ 16ರಂದು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಲಾಗಿದೆ. ಮೇ 17ರಂದು ಮಲ್ಪೆ ಬೀಚ್‌ನಲ್ಲಿ ಸಂಪ್ರದಾಯಿಕ ಕ್ರೀಡಾಕೂಟಗಳು ನಡೆಯಲಿದ್ದು, ಸಂಜೆ ವಾರಣಾಸಿಯ ಪುರೋಹಿತರಿಂದ ಗಂಗಾರತಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದು, ಅದೇ ದಿನ ರಾತ್ರಿ 8 ಗಂಟೆಗೆ ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಅವರ ಶಿವಭಕ್ತಿ ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ಮೇ 18ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಹಲವು ಸಂಸ್ಥೆಗಳು ಭಾಗವಹಿಸಲಿವೆ. ಉದ್ಯೋಗಕಾಂಕ್ಷಿಗಳು ಇದರ ಸದುಪಯೋಗ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಮೇ 19ರಂದು ಮಹಾ ರುದ್ರಯಾಗದ ಪೂರ್ಣಾಹುತಿ ನಡೆಯಲಿದ್ದು, ಭಕ್ತರಿಗೆ ಪ್ರತಿದಿನ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇನ್ನೂ ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸಲು “ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು” ಕಾರ್ಯಕ್ರಮವನ್ನು ಪ್ರತಿದಿನ ಸಂಜೆ 5ರಿಂದ 8ರವರೆಗೆ ಆಯೋಜಿಸಲಾಗಿದೆ.
ಈ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹ ಪಡೆಯಬೇಕೆಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು ಹಾಗೂ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಮನವಿ ಮಾಡಿದ್ದಾರೆ.






