ಶಿರ್ವ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಮೇ 1ರಂದು ಸಂಜೆ ನಡೆದಿದೆ.
ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ಅವರು ಸಂಜೆ ವೇಳೆ ಪೊಲೀಸ್ ವಸತಿ ಗೃಹ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಟಿಪ್ಪರ್ ವಾಹನದಲ್ಲಿ ಮರಳು ಅನ್‌ಲೋಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಾಹನ ಚಾಲಕನನ್ನು ವಿಚಾರಿಸಿದ ವೇಳೆ ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಅಥವಾ ದಾಖಲೆಗಳನ್ನು ಹಾಜರುಪಡಿಸಲು ವಿಫಲನಾಗಿದ್ದಾನೆ.
ಪಂಚ ಸಾಕ್ಷಿದಾರರ ಸಮಕ್ಷಮ ವಿಚಾರಣೆ ನಡೆಸಿದಾಗ ಚಾಲಕನು ತನ್ನ ಹೆಸರು ಜಗದೀಶ ಲಕ್ಷ್ಮಣ ದಂಡಗಿ (25), ಹಂಗಾರಗಿ, ಬಾದಾಮಿ, ಬಾಗಲಕೋಟೆ ಜಿಲ್ಲೆ ನಿವಾಸಿ ಎಂದು ತಿಳಿಸಿದ್ದಾನೆ. ಅಲ್ಲದೇ, ತಾನು ಹಾಗೂ ಹರೀಶ್ ಪೂಜಾರಿ ಎಂಬವರು ಹೊಳೆಯ ಬದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಸುಮಾರು 2 ಯೂನಿಟ್ ಮರಳು ಅನ್‌ಲೋಡ್ ಮಾಡಿರುವುದು ಪತ್ತೆಯಾಗಿದ್ದು, ಮರಳಿನ ಅಂದಾಜು ಮೌಲ್ಯ ₹10,000 ಎಂದು ಅಂದಾಜಿಸಲಾಗಿದೆ. ಜೊತೆಗೆ ₹8 ಲಕ್ಷ ಮೌಲ್ಯದ ಟಿಪ್ಪರ್ ಲಾರಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.





