ಶಂಕರನಾರಾಯಣ: ಸಾಲದ ಚಿಂತೆಯಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಲಿಯಾಣ ಗ್ರಾಮದ ಕಾರೆಕೊಡ್ಲು ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ನರಸಿಂಹ ನಾಯ್ಕ್ (44) ಎಂದು ಗುರುತಿಸಲಾಗಿದೆ. ಇವರು ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಸುಮಾರು ಒಂದು ವರ್ಷದ ಹಿಂದೆ ಸಾಲ ಮಾಡಿ ಬೈಕ್ ಖರೀದಿಸಿದ್ದಲ್ಲದೆ, ಕೈ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸಲು ಕಷ್ಟವಾಗುತ್ತಿರುವ ಬಗ್ಗೆ ಅವರು ಪತ್ನಿ ಜಯಂತಿ ಅವರಲ್ಲಿ ಪದೇ ಪದೇ ಹೇಳಿಕೊಳ್ಳುತ್ತಿದ್ದರು.
ದಿನಾಂಕ 30/04/2026 ರಂದು ರಾತ್ರಿ ಊಟ ಮಾಡಿದ ಬಳಿಕ ಮನೆಯ ಹಾಲ್‌ನಲ್ಲಿ ಮಲಗಿದ್ದ ನರಸಿಂಹ ನಾಯ್ಕ್, ಮಧ್ಯರಾತ್ರಿ ವೇಳೆ ಮನೆಯೊಳಗೆ ಕಾಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊರಗೆ ಹುಡುಕಿದ ವೇಳೆ ಮನೆಯ ಬಾಗಿಲು ಬಳಿ ಮಾಡಿನ ಕಬ್ಬಿಣದ ಪಟ್ಟಿಗೆ ಶಾಲಿನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣ ಕುಟುಂಬಸ್ಥರು ಶಾಲ್ ಕತ್ತರಿಸಿ ಕೆಳಗಿಳಿಸಿ, ನೆರೆಮನೆಯವರ ಸಹಾಯದಿಂದ ಅಂಬುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಾಲದ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದ್ದು, ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




