Home Dskshina Kannada ಯಕ್ಷಗಾನ ಹಿರಿಯ ಕಲಾವಿದ ಮಳಲಿ ಶೀನಯ್ಯ ನಿಧನಕ್ಕೆ ಗಣ್ಯರ ಸಂತಾಪ

ಯಕ್ಷಗಾನ ಹಿರಿಯ ಕಲಾವಿದ ಮಳಲಿ ಶೀನಯ್ಯ ನಿಧನಕ್ಕೆ ಗಣ್ಯರ ಸಂತಾಪ

ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಹಾಗೂ ‘ವೀರಬಾಹುಕ’ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದ ಮಳಲಿ ಶೀನಯ್ಯ (96) ಅವರು ಶಿವಮೊಗ್ಗದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

 

ಇಪ್ಪತ್ತನೇ ವಯಸ್ಸಿನಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ್ದ ಅವರು, ಸ್ಥಳೀಯ ಬಯಲಾಟಗಳ ಮೂಲಕ ವೇಷಧಾರಿಯಾಗಿ ಕಲಾರಂಗ ಪ್ರವೇಶಿಸಿದ್ದರು.

 

ಹಿರಿಯ ಕಲಾವಿದ ವೀರಭದ್ರ ನಾಯಕ್ ಅವರ ಬಳಿ ಯಕ್ಷಗಾನದ ತರಬೇತಿ ಪಡೆದ ಶೀನಯ್ಯ ಅವರು, ತಮ್ಮ ವಿಶಿಷ್ಟ ಅಭಿನಯ, ಧ್ವನಿ ಹಾಗೂ ಪಾತ್ರ ನಿರ್ವಹಣೆಯ ಮೂಲಕ ಯಕ್ಷಗಾನ ರಂಗದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು.

 

ಮಳಲಿ, ರಂಜದಕಟ್ಟೆ, ಹುಂಚಾ, ಹನ್ನೂರು, ಕೊಲ್ಲೂರು, ಸುಬ್ರಹ್ಮಣ್ಯ ಹಾಗೂ ಇಡಗುಂಜಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಭೀಮ, ಹಿರಣ್ಯಕಶಿಪು, ಕೌರವ, ಕೈಟಭ, ವೀರಬಾಹು, ವಲ್ಲಳ ಹಾಗೂ ದೂರ್ವಾಸ ಮೊದಲಾದ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಜನಮನ ಸೆಳೆದಿದ್ದರು.

 

ವೇಷಧಾರಿಯಾಗಿ ಮಾತ್ರವಲ್ಲದೆ, ತಾಳಮದ್ದಲೆಯ ಅರ್ಥಧಾರಿಯಾಗಿಯೂ ಅವರು ಅಪಾರ ಖ್ಯಾತಿ ಗಳಿಸಿದ್ದರು. ಯಕ್ಷಗಾನ ಕಲೆಯ ಮೇಲಿನ ಅಪಾರ ಪ್ರೀತಿ ಮತ್ತು ನಿಷ್ಠೆಯಿಂದ ಅನೇಕ ಕಲಾವಿದರಿಗೆ ಪ್ರೇರಣೆಯಾಗಿದ್ದ ಶೀನಯ್ಯ ಅವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

 

ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಹನ್ನೆರಡು ವರ್ಷಗಳ ಹಿಂದೆ ಅವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನಿಸಲಾಗಿತ್ತು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸೇರಿದಂತೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಹಾಗೂ ಸಾಂಸ್ಕೃತಿಕ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.