Home Karnataka News ಲೋಕಾಯುಕ್ತ ದಾಳಿ, ವಿಚಾರಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಪಿಡಿಓ

ಲೋಕಾಯುಕ್ತ ದಾಳಿ, ವಿಚಾರಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಪಿಡಿಓ

ಗದಗ : ಲೋಕಾಯುಕ್ತ ದಾಳಿಯ ಬಳಿಕ ಮಾನಸಿಕ ಒತ್ತಡಕ್ಕೆ ಸಿಲುಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಮೂಲತಃ ಧಾರವಾಡ ಜಿಲ್ಲೆಯವರಾದ ಮಕ್ತುಂಹುಸೇನ ಕರಡಿಗುಡ್ಡ ಅವರು ರೋಣ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಸತತ ಎರಡು ದಿನಗಳಿಂದ ಅವರು ಪತ್ನಿಯ ಕರೆಗೆ ಸ್ಪಂದಿಸಿರಲಿಲ್ಲ. ಪತಿ ಫೋನ್ ಸ್ವೀಕರಿಸದ ಕಾರಣ ಗಾಬರಿಗೊಂಡ ಪತ್ನಿ, ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸುವಂತೆ ವಿನಂತಿಸಿದ್ದಾರೆ. ಮನೆಯ ಮಾಲೀಕರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

 

2 ವರ್ಷದ ಹಿಂದೆ ಇವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯ ನಂತರ ಇಲಾಖೆಯು ಇವರನ್ನು ಅಮಾನತುಗೊಳಿಸಿತ್ತು. ದೀರ್ಘಕಾಲದ ಅಮಾನತ್ತಿನ ಬಳಿಕ ಇವರನ್ನು ಗದಗ ಜಿಲ್ಲೆಗೆ ನಿಯೋಜನೆಗೊಳಿಸಲಾಗಿತ್ತು. ಕಳೆದ ತಿಂಗಳಷ್ಟೇ ಇವರು ಕೊತಬಾಳ ಪಂಚಾಯತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.