ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಉದ್ಭವವಾದ ಸಮಸ್ಯೆಗಳಿಂದ ಬಡರೋಗಿಗಳು, ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ ಈ ಬಗ್ಗೆ ಸಾರ್ವಜನಿಕ ವಲಯದಿಂದ ಬಹಳವಾಗಿ ದೂರುಗಳು ಕೇಳಿಬರುತ್ತಿವೆ.
ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಅವರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಪಡಿಸಿದ್ದಾರೆ.
ಆಗ್ರಹದಲ್ಲಿ ಮುಖ್ಯವಾಗಿ ಬೇಕಾದ ಅಗತ್ಯತೆಗಳ ಬಗ್ಗೆಯೂ ಸೂಚಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಜಿಲ್ಲಾಸ್ಪತ್ರೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸುವಂತೆ ವಿನಂತಿಯನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಡ ರೋಗಿಗಳಿಗೆ ಎಲ್ಲಾ ಔಷಧಿ, ಚುಚ್ಚುಮದ್ದುಗಳು ಲಭ್ಯವಾಗುತ್ತಿಲ್ಲ. ಬಡರೋಗಿಗಳು ವೈದ್ಯರು ಸೂಚಿಸಿದ ಕೆಲವು ದುಬಾರಿ ಬೆಲೆಯ ಔಷದಿಗಳನ್ನು ಖಾಸಗಿ ಔಷದಿ ಅಂಗಡಿಗಳಲ್ಲಿ ಹಣತೆತ್ತು ಪಡೆಯಬೇಕಾಗುತ್ತದೆ. ಆರೋಗ್ಯ ಇಲಾಖೆ ಪ್ರತಿಯೊಂದು ಔಷಧಿಗಳನ್ನು ಜಿಲ್ಲಾಸ್ಪತ್ರೆಯ ಔಷಧಿ ಕೇಂದ್ರದಲ್ಲಿ ಉಚಿತವಾಗಿ ಲಭಿಸುವಂತೆ ವ್ಯವಸ್ಥೆಗೊಳಿಸ ಬೇಕಾಗಿದೆ.
ಜಿಲ್ಲಾಸ್ಪತ್ರೆಯ ವಠಾರದಲ್ಲಿ ಈ ಮೊದಲಿಂದಲೂ ಕ್ಯಾಂಟಿನ್ ಕಾರ್ಯ ನಿರ್ವಹಿಸುತಿತ್ತು. ಕೆಲವು ಸಮಯದಿಂದ ಕ್ಯಾಂಟಿನ್ ಮುಚ್ಚಲ್ಪಟ್ಟಿದೆ. ರೋಗಿಗಳಿಗೆ ಉಚಿತವಾದ ಆಹಾರ ವ್ಯವಸ್ಥೆ ಜಿಲ್ಲಾಸ್ಪತ್ರೆಯಲ್ಲಿ ಇದ್ದರೂ, ರೋಗಿಗಳ ಸಂಬಂಧಿಗಳು ಕ್ಯಾಂಟಿನ್ ತಿನಿಸುಗಳಿಗೆ ಅವಲಂಬಿತ ಆಗಬೇಕಾಗಿರುತ್ತದೆ. ಜಿಲ್ಲಾಸ್ಪತ್ರೆಯ ವಠಾರದಲ್ಲಿ ಕ್ಯಾಂಟಿನ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಹಸಿದ ಹೊಟ್ಟೆಯಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಕಂಡುಬಂದಿದೆ.
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಂಭೀರ ಸ್ಥಿತಿಯಲ್ಲಿದ್ದು, ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿರುವ ಅಪರಿಚಿತ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲುಪಡಿಸುವ ಸೇವಾಕಾರ್ಯವು 112 ಪೋಲಿಸ್ ತುರ್ತು ಸಹಾಯವಾಣಿ, 108 ಅಂಬುಲೆನ್ಸ್ ವಾಹನಗಳಿಂದ ಹಾಗೂ ಸಮಾಜಸೇವಕರಿಂದ ನಡೆಯುತ್ತಲೇ ಇರುತ್ತದೆ. ದಿಕ್ಕಿಲ್ಲದ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖವಾದರೂ ಆಸ್ಪತ್ರೆಯಲ್ಲಿಯೇ ನೆಲೆಪಡೆಯುವ ಪ್ರಸಂಗಗಳು ಬಹಳವಾಗಿ ಕಾಣಲುಸಿಗುತ್ತವೆ. ಅಂತಹ ನಿರ್ಗತಿಕರನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳು ನಿರ್ಗತಿಕರ ಪುರ್ನವಸತಿ ಕೇಂದ್ರಗಳಲ್ಲಿ ದಾಖಲುಪಡಿಸುವ ವ್ಯವಸ್ಥೆಗೊಳಿಸಬೇಕಾಗಿದೆ. ಹಾಗೆಯೇ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಬಹುಮಹಡಿಗಳ ಆಸ್ಪತ್ರೆಯಾಗಿದೆ. ಸಾರ್ವಜನಿಕರು ಬಳಕೆಯ ಲಿಪ್ಟ್ ಯಂತ್ರವು ಕೆಟ್ಟು ಹಲವು ಸಮಯ ಕಳೆದಿದೆ. ಮೆಟ್ಟಿಲು ಹತ್ತಿ ಮಹಡಿ ಎರಬೇಕಾದ ಸಮಸ್ಯೆ ಎದುರಾಗಿದೆ. ಹಿರಿಯ ನಾಗರಿಕರ, ವಿಶೇಷಚೇತನರ ಪರಿಸ್ಥಿತಿ ಅಯ್ಯೋಮಯ ಆಗಿದೆ.
ಆಸ್ಪತ್ರೆಯ ವಠಾರದಲ್ಲಿ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಬೇಕಾಗಿದೆ. ಪೌಷ್ಟಿಕ ಪಾನೀಯಗಳು, ಸೋಪು, ಎಣ್ಣೆ, ಕಾಲ್ಗೆಟ್, ಮೊದಲಾದ ವಸ್ತುಗಳು ರೋಗಿಗಳಿಗೆ ಅಗತ್ಯತೆ ಇರುತ್ತದೆ. ಹಾಗೆಯೇ ಶವ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ವಾರಸುದಾರರು ಇರುವ ಮತ್ತು ಇಲ್ಲದ ಶವಗಳಿಗೆ ಪ್ಲಾಸ್ಟಿಕ್ ಹೊದಿಕೆ, ಮತ್ತು ದೇಹದ ಭಾಗಗಳನ್ನು ಸಂಗ್ರಹಿಸಿಡುವ ಪ್ಲಾಸ್ಟಿಕ್ ಡಬ್ಬಗಳು, ಸುಗಂಧ ದ್ರವ್ಯಗಳ ಬಾಟಲಿಗಳು, ಮೊದಲಾದ ಪರಿಕರಗಳು ಅಗತ್ಯತೆ ಇರುತ್ತದೆ. ಇದರ ಖರೀದಿಗೆ ಸಾರ್ವಜನಿಕರು ಪರದಾಡಬೇಕಾಗುತ್ತದೆ.






