ಮಂಗಳೂರು: ಮೃತ ಮೀನುಗಾರ ಶ್ರಮ ಜೀವಿಯಾಗಿದ್ದು ಆಕಸ್ಮಿಕ ಅಗಲಿಕೆಯಿಂದ ಕುಟುಂಬ ಸಂಕಷ್ಟಕ್ಕೀಡಾಗಿದೆ. ಅವರಿಗೆ ಎಷ್ಟು ನೆರವು ನೀಡಿದರೂ ಕಡಿಮೆ. ಸರ್ಕಾರದ ವತಿಯಿಂದಲೂ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಮಂಗಳೂರು ಬಂದರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ರೇವತಿ ತಿಳಿಸಿದರು.
ಫೆಬ್ರವರಿ ತಿಂಗಳಲ್ಲಿ ಧಕ್ಕೆಯಲ್ಲಿ ದಾರಿದೀಪದ ಕಂಬ ಬಿದ್ದು ಮೃತಪಟ್ಟ ಮೀನುಗಾರ ಮುರುಗನ್ ಪಿ. ಅವರ ಕುಟುಂಬಕ್ಕೆ ‘ಬಹರ್ ಎ ನೂರ್’ ಸಭಾಂಗಣದಲ್ಲಿ ಬುಧವಾರ ನಡೆದ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ 1.50ಲಕ್ಷ, ಹಸಿಮೀನು ವ್ಯಾಪಾರಸ್ಥರ ಸಂಘದಿಂದ 1.50ಲಕ್ಷ, ಮೀನುಗಾರಿಕಾ ಕಾರ್ಮಿಕರಿಂದ ಸಂಗ್ರಹವಾದ 1.20ಲಕ್ಷ, ಕಾರ್ಮಿಕರಾದ ಸಿಯಾಬ್, ಬಾಬು ಮತ್ತು ಮೀರನ್ ಇವರಿಂದ 1ಲಕ್ಷ ಹಾಗೂ ಮೀನುಗಾರಿಕಾ ಉಪನಿರ್ದೇಶಕಿ ರೇವತಿ ಇವರ ವೈಯುಕ್ತಿಕ ನೆಲೆಯಲ್ಲಿ 20 ಸಾವಿರ ಸಹಿತ ಒಟ್ಟು 5.40 ಲಕ್ಷ ರೂಪಾಯಿಗಳ ನೆರವು ಮುರುಗನ್ ಅವರ ಪತ್ನಿ ಹಂಸವಲ್ಲಿ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಹಜ್ ಯಾತ್ರಾರ್ಥಿಗಳಾದ ಯು.ಟಿ.ಅಹ್ಮದ್ ಶರೀಫ್, ಅಬ್ದುಲ್ ಅಝೀಝ್ ಬಸ್ತಿಪಡ್ಪು, ಎಚ್.ಆರ್.ಇಕ್ಬಾಲ್, ಮಹಮ್ಮದ್ ಸಿರಾಜ್ ಮಾಸ್ತಿಕಟ್ಟೆ, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜೆ.ಹನೀಫ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸ್ಹಾಕ್ ಅಧ್ಯಕ್ಷತೆ ವಹಿಸಿದ್ದರು.
ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಎಲ್. ಇಸ್ಮಾಯಿಲ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಬಿ.ಇಬ್ರಾಹಿಂ ಖಲೀಲ್, ಎಸ್.ಎಂ.ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಟಿ.ಎಚ್.ಹಮೀದ್, ಎಂ.ಎ.ಗಫೂರ್, ಎ.ಎಂ.ಕೆ.ಮಹಮ್ಮದ್ ಇಬ್ರಾಹಿಂ, ಯು.ಟಿ.ಅಹ್ಮದ್ ಶರೀಫ್, ಬಿ.ಮಹಮ್ಮದ್ ಶಾಲಿ, ಎಸ್.ಕೆ.ಇಸ್ಮಾಯಿಲ್, ಅನ್ವರ್ ಎ.ಎನ್.ಆರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಕಾರ್ಯಕ್ರಮ ನಿರೂಪಿಸಿದರು.





