ಉಡುಪಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಹಾಗೂ ಪುರಸಭಾ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ‘ಲೋಕ ಕಲ್ಯಾಣ ಮೇಳ’ ಕಾರ್ಯಕ್ರಮವು ಕಾಪು ಪುರಸಭೆಯ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಇಂತಹ ಮೇಳಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ಈ ವೇಳೆ ಪ್ರಧಾನ ಮಂತ್ರಿ ಕಿರು ಆಹಾರ ತಯಾರಿಕಾ ಘಟಕ ಸ್ಥಾಪನೆ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ 11 ಫಲಾನುಭವಿಗಳಿಗೆ ತಲಾ ₹40,000ರಂತೆ ಒಟ್ಟು ₹4.40 ಲಕ್ಷ ಮೊತ್ತದ ಸಾಲ ಮಂಜೂರಾತಿ ಪತ್ರಗಳನ್ನು ಶಾಸಕರು ವಿತರಿಸಿದರು.
ಈ ಯೋಜನೆಯಿಂದ ಫಲಾನುಭವಿಗಳು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಪು ಪುರಸಭೆಯ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ಪುರಸಭೆಯ ಕಂದಾಯ ಅಧಿಕಾರಿ ಶಶಿಕಲಾ, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
‘ಲೋಕ ಕಲ್ಯಾಣ ಮೇಳ’ದ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸಾಲ ಸೌಲಭ್ಯಗಳು ಹಾಗೂ ಉದ್ಯಮಶೀಲತೆ ಅಭಿವೃದ್ಧಿಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಾರ್ವಜನಿಕರಿಗೆ ನೀಡಲಾಯಿತು.




