ಸಾಸ್ತನ : ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ಸೊಂದು ಟೋಲ್ ಗೇಟ್ ಕಂಬಕ್ಕೆ ಡಿಕ್ಕಿ ಹೊಡೆದು 12 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಸಾಸ್ತಾನ ಟೋಲ್ ಗೇಟ್ ಬಳಿ ಆ.24 ರ ಭಾನುವಾರ ಮುಂಜಾನೆ ಸಂಭವಿಸಿದೆ.
ಇಳಕಲ್ ನಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೇಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಬಸ್ಸಿನಲ್ಲಿ 36 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. 12 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಉಳಿದ ಪ್ರಯಾಣಿಕರು ಹಾಗೂ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡವರನ್ನು ತಕ್ಷಣ ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಾಗರಾಜ್ ಪುತ್ರನ್ ಹಾಗೂ ಟೋಲ್ ಆಂಬುಲೆನ್ಸ್ ನಲ್ಲಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
