Home Karavali Karnataka ರಾಷ್ಟ್ರವಾದಿ ಅಂಬೇಡ್ಕರ್,ತಿಲಕ್,ಪಟೇಲ್ ಯುವ ನ್ಯಾಯವಾದಿಗಳಿಗೆ ಆದರ್ಶ……!!

ರಾಷ್ಟ್ರವಾದಿ ಅಂಬೇಡ್ಕರ್,ತಿಲಕ್,ಪಟೇಲ್ ಯುವ ನ್ಯಾಯವಾದಿಗಳಿಗೆ ಆದರ್ಶ……!!

ಆರೂರು ಸುಕೇಶ್ ಶೆಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಧಿವಕ್ತ ಪರಿಷತ್,ಉಡುಪಿ ಜಿಲ್ಲೆ

ಉಡುಪಿ : ಅದು 1919 ರ ಎಪ್ರಿಲ್ 13. ಪಂಜಾಬಿನ ನೆತ್ತಿಯ ಮೇಲೆ ಸುಡು ಬಿಸಿಲು. ಆದರೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದವರಿಗೆ ಬಿಸಿಲ ಬೇಗೆಗಿಂತಲೂ ದೇಶ ಪ್ರೇಮದ ಕಿಚ್ಚು ಉಕ್ಕಿ ಹರಿಯುತ್ತಿತ್ತು. ಜನರಲ್ ಡಯರ್ ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಗೆ ದೊಡ್ಡ ಸೈನ್ಯವನ್ನು ತಂದು ಮನಸೋ ಇಚ್ಚೆ ಗುಂಡಿನ ಮಳೆಯನ್ನೇ ಗೆರೆದು, ಭಾರತಾಂಬೆಯ ಸಹಸ್ರಾರು ಮಕ್ಕಳ ಪ್ರಾಣಪಕ್ಷಿಯನ್ನು ಕಿತ್ತುಕೊಂಡನು.

ಪ್ರಿಯ ಓದುಗ ಮಿತ್ರರೇ, ವಕೀಲ ದಿನಾಚರಣೆಯ ಈ ಶುಭವಸರಕ್ಕೂ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದಾರ…? ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮುಗಿಸುವ ವೇಳೆಗೆ ನ್ಯಾಯವಾದಿಗಳಾಗಿ ರಾಷ್ಟ್ರಭಕ್ತಿ ಇರದೇ ಇದ್ದಲ್ಲಿ ಏನೆಲ್ಲಾ ಅನಾಹುತಗಳಾಗುತ್ತವೇ ಎಂಬುದು ನಿಮಗೆ ತಿಳಿಯಲಿದೆ.

ಇತ್ತೀಚೆಗೆ ತೆರೆಕಂಡ “ಕೇಸರಿ – 2” ಜಲಿಯನ್‍ವಾಲಾ ಬಾಗ್ ಅಥವಾ ಅಮೃತಸರ ಹತ್ಯಾಕಾಂಡ ಕೇಸರಿ ಚಾಪ್ಟರ್ 2’ನ ಮೂಲ. ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟ ಮಾಡುವುದಕ್ಕೆ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರು ಸೇರಿರುತ್ತಾರೆ. ಕರ್ಫ್ಯೂ ವಿಧಿಸಿದ್ದ ಕಾರಣ ಬ್ರಿಟಿಷರ ಜನರಲ್ ರೆಗಿನಾಲ್ಡ್ ಡೈಯರ್ ಅಲ್ಲಿ ನೆರೆದಿದ್ದವರ ಮೇಲೆ ಮನಸೋ ಇಚ್ಚೆ ಗುಂಡಿನ ಸುರಿಮಳೆಯನ್ನೇ ಸುರಿಸುತ್ತಾನೆ. ಸಾವಿರಾರು ಜನರು ಸಾವನ್ನಪ್ಪುತ್ತಾರೆ. ಈ ಪ್ರಕರಣವನ್ನು ಕೇರಳ ಮೂಲದ ಶಂಕರನ್ ನಾಯರ್ ಬ್ರಿಟಿಷರ ಪರವಾಗಿ ವಾದಿಸಿ ಗೆಲ್ಲುತ್ತಾರೆ.

ಈ ಕಾರಣಕ್ಕೆ ಬ್ರಿಟಿಷರು ಬಿರುದು ನೀಡುವುದರ ಜೊತೆಗೆ ವೈಸ್‌ರಾಯ್ ಕೌನ್ಸಿಲ್‌ನಲ್ಲಿ ಸದಸ್ಯತ್ವನ್ನು ನೀಡುತ್ತಾರೆ. ನಮ್ಮ ದೇಶದ ಸುಪುತ್ರರೇ ಅವರ ಜ್ಞಾನದಿಂದ ಬ್ರಿಟಿಷರ ಪರವಾಗಿ ವಾದಿಸಿ, ಗೆದ್ದು, ಭಾರತೀಯರಿಗೆ ಅನ್ಯಾಯ ಮಾಡಿದ್ದರು. ನಂತರ ನಡೆದದ್ದು ರೋಚಕ.

ಇದೇ ವೇಳೆ ಸಿಖ್ ಕ್ರಾಂತಿಕಾರಿಯ ಮಗ ಶಂಕರನ್ ನಾಯರ್‌ ಅವರಿಗೆ ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಅಸಲಿ ಸಂಗತಿಯನ್ನು ಮನವರಿಕೆ ಮಾಡಿಕೊಡುತ್ತಾನೆ. ಆ ಬಳಿಕ ಶಂಕರನ್ ನಾಯರ್ ಅಪ್ಪಟ ದೇಶಪ್ರೇಮಿಯಾಗಿ ಜಲಿಯನ್ ವಾಲಾಬಾಗ್‌ನಲ್ಲಿ ‌ನಿಜಕ್ಕು ಏನು ನಡೆದಿತ್ತು..? ಎಂಬುದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಜನರಲ್ ಡಯರ್ ವಿರುದ್ದ ಪ್ರಕರಣ ದಾಖಲಿಸಿ ಯಶಸ್ವಿಯಾಗುವುದನ್ನು ಸಿನೆಮಾದಲ್ಲಿ ಚಿತ್ರಿಸಲಾಗಿದೆ. ಕೆಲವೊಂದು ಘಟನೆಗಳನ್ನು ಮನರಂಜನೆಗಾಗಿ ಮಾಡಿದ್ದರೂ, ಸತ್ಯ ಆಧಾರಿತ ಚಿತ್ರ ಇದಾಗಿದೆ.

ಶಂಕರನ್ ನಾಯರ್ ಅವರ ಚಾಕಚಕ್ಯತೆ, ವಕೀಲಿಕೆಯ ಶೈಲಿಯನ್ನು ಅದ್ಬುತವಾಗಿ ತೋರಿಸಲಾಗಿದೆ. ಅಂತೆಯೇ ಇಂದಿನ ಯುವ ಪೀಳಿಗೆ ಕೇವಲ ಹಣದ ಹಿಂದೆ ಹೋಗದೇ, ನಿರಂತರ ಓದಿನ ಮೂಲಕ ರಾಷ್ಟ್ರಭಕ್ತಿಯನ್ನು ಅಳವಡಿಸಿಕೊಂಡು ಕೆಲಸ ಮಾಡಿದರೇ ಯಶಸ್ಸು ಶತಸಿದ್ದ.

“ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು”

ಗೋಪಾಲಕೃಷ್ಣ ಅಡಿಗರ ಈ ಸಾಲುಗಳು ಇಂದಿನ ಪೀಳಿಗೆಗೆ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತ. ಎಲ್‌ಎಲ್‌ಬಿ ಪದವಿ ಅಲ್ಲದೇ ಎಲ್ಲಾ ರೀತಿಯ ಪದವಿಯನ್ನು ಪಡೆದವರು ಆಯಾ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಬೇಕು. ಅದರ ಜೊತೆಗೆ ರಾಷ್ಟ್ರಭಕ್ತಿ ಇರಲೇಬೇಕು. ದೇಶ, ಭಾರತಾಂಬೆಯಿಂದಾಗಿ ನಾವುಗಳು ಎಂಬುದು ನಮಗೆಲ್ಲರಿಗೂ ಸ್ಪಷ್ಟತೆ ಇರಬೇಕು.

ಕೇವಲ ಒಂದು ಸಿನೆಮಾ ನೋಡಿ ಅವರಂತೆ ಆಗುತ್ತೇನೆ ಎಂದು ಕನಸು ಕಂಡರೇ ಸಾಲದು. ನಿರಂತರ ಶ್ರಮ ಅಗತ್ಯ. ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ್ ತಿಲಕ್, ಡಾ.ಬಿಆರ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕರು ನ್ಯಾಯವಾದಿಗಳಾಗಿದ್ದವರು. ಇಂದಿನ ಪೀಳಿಗೆಯ ನಾವುಗಳು, ಬಿ.ವಿ ಆಚಾರ್ಯ, ಹರೀಶ್ ಸಾಳ್ವೆ ಸೇರಿದಂತೆ ಮೊದಲಾದ ಮೇರು ವ್ಯಕ್ತಿತ್ವದವರಿಂದ ಕಲಿಯಲು ಅವಕಾಶ ದೊರೆತಿರುವುದು ಸೌಭಾಗ್ಯ‌. ಈ ಎಲ್ಲಾ ಮಹನೀಯರನ್ನು ಆದರ್ಶವಾಗಿ ಪಡೆದು, ಮುಂದಿನ ಪೀಳಿಗೆಗೆ ನಾವು ಆದರ್ಶ ಸ್ವರೂಪಿಗಳಾಗಬೇಕು. ಆದರೆ ರಾಷ್ಟ್ರ ಪ್ರೇಮವನ್ನು ಎಂದಿಗೂ ಮರೆಯಬಾರದು.

ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಕೀಲರಿಗೆ ದೇಶಭಕ್ತಿ ಅತ್ಯಾವಶ್ಯಕ ಗುಣ. ದೇಶಭಕ್ತಿ ಎಂದರೆ ಕೇವಲ ಭಾವನೆ ಅಲ್ಲ — ಅದು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಹೊಣೆಗಾರಿಕೆಯೂ ಹೌದು. ನ್ಯಾಯವನ್ನು ಎಲ್ಲ ವರ್ಗದ ಜನರಿಗೆ ಸಮಾನವಾಗಿ ತಲುಪಿಸುವುದು, ಅಧಿಕಾರ ದುರುಪಯೋಗದ ವಿರುದ್ಧ ನಿಲ್ಲುವುದು, ಮಾನವ ಹಕ್ಕುಗಳನ್ನು ರಕ್ಷಿಸುವುದು—ಇವೆಲ್ಲವೂ ನಿಜವಾದ ದೇಶಭಕ್ತಿಯ ರೂಪಗಳು. ನ್ಯಾಯಾಲಯದಲ್ಲಿ ವಕೀಲರ ಪ್ರತಿಯೊಂದು ವಾದವು ರಾಷ್ಟ್ರದ ನ್ಯಾಯಸಂಸ್ಥೆಯ ಮೇಲೆ ನಾಗರಿಕರು ಹೊಂದಿರುವ ನಂಬಿಕೆಯನ್ನು ಬಲಪಡಿಸುತ್ತದೆ. ಆದ್ದರಿಂದ ವಕೀಲರ ದೇಶಭಕ್ತಿ ಎಂದರೆ ಸಂವಿಧಾನ, ನ್ಯಾಯ ಮತ್ತು ಮಾನವೀಯತೆಯ ಮೇಲಿನ ನಿಷ್ಠೆ.