Home Latest ಅತ್ರಾಡಿ ತಾಯಿ ಮಗಳ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಅತ್ರಾಡಿ ತಾಯಿ ಮಗಳ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಉಡುಪಿ : ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಇಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

 

ಮದಗ ಅತ್ರಾಡಿ ಗ್ರಾಮದ ಮುಳ್ಳುಗುಜ್ಜಿ ನಿವಾಸಿ ದೇವಿ (27) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

 

ದೂರುದಾರೆಯ ಅಕ್ಕ ಚೆಲುವಿ ಹಾಗೂ ಆಕೆಯ ಮಗಳು ಪ್ರಿಯಾ ತಮ್ಮ ಮನೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

 

2022ರ ಮೇ 9ರಂದು ಬೆಳಿಗ್ಗೆ ಚೆಲುವಿ ಮನೆಗೆ ತೆರಳಿ ಪರಿಶೀಲಿಸಿದಾಗ, ಇಬ್ಬರೂ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಿಯಾಳ ಕುತ್ತಿಗೆಯಲ್ಲಿ ಗಾಯದ ಗುರುತು ಹಾಗೂ ಚೆಲುವಿಯ ಮೂಗು-ಬಾಯಿಯಿಂದ ರಕ್ತಸ್ರಾವ ಕಂಡುಬಂದಿತ್ತು.

 

ಘಟನೆಯ ಹಿನ್ನೆಲೆ ಪರಿಶೀಲಿಸಿದ ಪೊಲೀಸರು, ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆಯ ಮೇರೆಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯನ್ನು ಕೈಗೊಂಡ ಅಂದಿನ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಅವರು, ಪ್ರಕರಣದ ಆರೋಪಿ ಭದ್ರಾವತಿ ನಿವಾಸಿ ಹರೀಶ್ ಆರ್/ಗಣೇಶ್ (30) ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

 

ಪ್ರಕರಣದ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು, 2026ರ ಮಾರ್ಚ್ 26ರಂದು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆಯೊಂದಿಗೆ ರೂ.20,000 ದಂಡ ವಿಧಿಸಿ ಆದೇಶಿಸಿದ್ದಾರೆ.