Home Latest ಬ್ರಹ್ಮಾವರ: ಸಹಿ ದುರುಪಯೋಗಪಡಿಸಿ ಕೋಟ್ಯಂತರ ರೂಪಾಯಿ ವಂಚನೆ : ಮೂವರ ವಿರುದ್ಧ ಪ್ರಕರಣ ದಾಖಲು..!

ಬ್ರಹ್ಮಾವರ: ಸಹಿ ದುರುಪಯೋಗಪಡಿಸಿ ಕೋಟ್ಯಂತರ ರೂಪಾಯಿ ವಂಚನೆ : ಮೂವರ ವಿರುದ್ಧ ಪ್ರಕರಣ ದಾಖಲು..!

ಬ್ರಹ್ಮಾವರ: ಕೇವಲ ಸಾಕ್ಷಿದಾರರಾಗಿ ಸಹಿ ಪಡೆದು, ಬಳಿಕ ಅವರನ್ನೇ ಜಾಮೀನುದಾರರನ್ನಾಗಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿಗೆ ಸಂಚು ರೂಪಿಸಿದ ಗಂಭೀರ ಆರೋಪವೊಂದು ಇಲ್ಲಿನ ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಕೇಳಿಬಂದಿದೆ.

 

ಈ ಕುರಿತು ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ದೂರಿನ ಸಾರಾಂಶದ ಪ್ರಕಾರ, 2013 ರಲ್ಲಿ ಆರೋಪಿತರಾದ ಎನ್. ಹರೀಶ್ ಕಾರಂತ್ ಅವರು ಜೆಸಿಬಿ ಯಂತ್ರ ಖರೀದಿಸಲು ಸರ್ವೋದಯ ಕೋ-ಆಪರೇಟಿವ್ ಸೊಸೈಟಿಯಿಂದ ಸಾಲ ಪಡೆದಿದ್ದರು. ಈ ಸಂದರ್ಭದಲ್ಲಿ ಫಿರ್ಯಾದಿದಾರರಾದ ಬಾಲಕೃಷ್ಣ ಹೆಗ್ಡೆ ಮತ್ತು ಗಂಗಾಧರ ಹೆಗ್ಡೆ ಅವರಿಂದ “ಕೇವಲ ಗುರುತು-ಸಾಕ್ಷಿಗಳಾಗಿ” ಸಹಿ ಪಡೆಯುವ ನೆಪದಲ್ಲಿ ದಾಖಲೆಗಳಿಗೆ ಸಹಿಗಳನ್ನು ಪಡೆಯಲಾಗಿತ್ತು. ಆದರೆ, ಆರೋಪಿಗಳು ಈ ಸಹಿಗಳನ್ನು ದುರುಪಯೋಗಪಡಿಸಿಕೊಂಡು, ಫಿರ್ಯಾದಿದಾರರನ್ನೇ ಸಾಲಕ್ಕೆ ಜಾಮೀನುದಾರರನ್ನಾಗಿ ತೋರಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವಿದೆ.

 

 

ಸಾಲ ಪಡೆದ ಬಳಿಕ ಹಣ ಮರುಪಾವತಿ ಮಾಡದ ಆರೋಪಿಗಳು, ಜಿಲ್ಲಾ ರಿಜಿಸ್ಟ್ರಾರ್ ಮುಂದೆ ಸುಳ್ಳು ಮಾಹಿತಿಗಳನ್ನು ನೀಡಿ ಏಕಪಕ್ಷೀಯ ತೀರ್ಪು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ, ಸುಮಾರು ₹33,89,899/- ವಸೂಲಾತಿಗಾಗಿ ಬಾಲಕೃಷ್ಣ ಹೆಗ್ಡೆ ಅವರ ವಿರುದ್ಧ ಎಕ್ಸಿಕ್ಯೂಶನ್ ಪ್ರಕರಣ ದಾಖಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾರೆ.

 

ಸಾಲಕ್ಕಾಗಿ ಅಡಮಾನವಿಟ್ಟಿದ್ದ ಜೆಸಿಬಿ ಕ್ರೇನ್ ಅನ್ನು ಫಿರ್ಯಾದಿದಾರರ ಗಮನಕ್ಕೆ ತಾರದೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ.

 

ಮಾರಾಟದಿಂದ ಬಂದ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೆ ಆರೋಪಿಗಳು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿದ್ದಾರೆ. ಚೆಕ್ ದುರುಪಯೋಗ: ಈ ಹಿಂದಿನ ಸಾಲದ ವ್ಯವಹಾರದ ವೇಳೆ ನೀಡಿದ್ದ ಖಾಲಿ ಚೆಕ್‌ಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ.

 

ನೈಜ ಜಾಮೀನುದಾರರಾದ 3ನೇ ಆರೋಪಿಯ ಪತ್ನಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಉದ್ದೇಶಪೂರ್ವಕವಾಗಿ ಅಮಾಯಕ ಫಿರ್ಯಾದಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವು ಕಾಲಮಿತಿ ಮೀರಿದ ನಂತರವೂ ದಾವೆ ಹೂಡುವ ಮೂಲಕ ನ್ಯಾಯಾಲಯವನ್ನು ತಪ್ಪುದಾರಿಗೆಳೆದ ಪ್ರಯತ್ನವಾಗಿದೆ ಎನ್ನಲಾಗಿದೆ.

 

ಪ್ರಸ್ತುತ, ನ್ಯಾಯಾಲಯದ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸರು ಅಪರಾಧ ಸಂಖ್ಯೆ 72/2026 ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎನ್. ಹರೀಶ್ ಕಾರಂತ್, ನಿತ್ಯಾನಂದ ಕಾಮತ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ವಿರುದ್ಧ ತನಿಖೆ ಚುರುಕುಗೊಂಡಿದೆ.