ಉಡುಪಿ : ಸಿಟಿ ಬಸ್ ನಿಲ್ದಾಣದ ಸಮೀಪ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹಲವು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿ ಸಂಭವಿಸಿದ್ದು ಈ ಘಟನೆಯಿಂದಾಗಿ ವ್ಯಾಪರಸ್ಥರು ಕಂಗಲಾಗಿದ್ದಾರೆ. ಈ ಕೂಡಲೇ ಸರಕಾರ ವ್ಯಾಪಾರಸ್ಥರ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕೆಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಅಗ್ನಿ ಅನಾಹುತ ಸಂಭವಿಸಿ 45 ನಿಮಿಷ ಕಳೆದರೂ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸದ ಹಿನ್ನಲೆಯಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದೆ ಎಂದು ವ್ಯಾಪಾರಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನಾ ಸ್ಥಳದಿಂದ ಎರಡು ಕಿ.ಮೀ ದೂರ ಇರುವ ಅಗ್ನಿ ಶಾಮಕ ದಳದ ಕಚೇರಿಯಿಂದ ಘಟನಾ ಸ್ಥಳಕ್ಕೆ ಆಗಮಿಸಲು ಇಷ್ಟೊಂದು ಸಮಯ ಯಾಕೆ ಹಿಡಿಯಿತು? ನಗರ ಪ್ರದೇಶದಲ್ಲಿ ಅನಾಹುತಗಳು ಸಂಭವಿಸಿದಾಗ ಕ್ಷಣ ಮಾತ್ರದಲ್ಲಿ ಕಾರ್ಯಪ್ರವೃತ್ತರಾಗಿ ಬೆಂಕಿ ನಿಯಂತ್ರಕ್ಕೆ ತರುವಲ್ಲಿ ಇಲಾಖೆ ಯಾಕೆ ವಿಫಲಗೊಂಡಿದೆ? ಅಗ್ನಿಶಾಮಕ ದಳದ ತಡವಾಗಿ ಆಗಮಿಸಿರುವ ಕುರಿತು ಈಗಾಗಲೇ ಮಾಧ್ಯಮಗಳು ಕೂಡ ವರದಿಯನ್ನು ಪ್ರಕಟಿಸಿದ್ದು ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಆಡಳಿತ ವೈಫಲ್ಯ ಕಂಡುಬಂದಲ್ಲಿ, ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನು ವಾಣಿಜ್ಯ ಸಂಕೀರ್ಣಗಳಲ್ಲಿ ಬೆಂಕಿ ನಿರೋಧಕಗಳನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಕಟ್ಟು ನಿಟ್ಟಾಗಿ ಪಾಲಿಸುವಂತೆ ಮಾಡಬೇಕು. ನಗರದ ಕೆಲವು ವಾಣಿಜ್ಯ ಸಂಕೀರ್ಣ ಗಳ ಬಳಿ ಅಗ್ನಿ ಶಾಮಕ ವಾಹನ ಸಂಚಾರಕ್ಕೆ ದಾರಿಯೇ ಇಲ್ಲದ ಪರಿಸ್ಥಿತಿ ಇದೆ. ಕಳೆದ ಬಾರಿ ನಗರದ ಪ್ರಮುಖ ವಾಣಿಜ್ಯ ಸಂಕೀರ್ಣದ ಬಳಿ ಅಗ್ನಿ ಅನಾಹುತ ಸಂಭವಿಸಿದಾಗ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಲು ದಾರಿಯಿಲ್ಲದೆ ಪರಿದಾಡುವಂತಾಗಿತ್ತು. ನವ ವಾಣಿಜ್ಯ ಕಟ್ಟಡಗಳ ಸೆಟ್ ಬ್ಯಾಕ್ ಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಎಲ್ಲ ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಬೆಂಕಿ ನಿರೋಧಕಗಳನ್ನು ಹೊಂದಲು ಮತ್ತು ಅದನ್ನು ಬಳಸುವ ಸೂಕ್ತ ತರಬೇತಿಯನ್ನು ನೀಡುವ ಕುರಿತು ಕ್ರಮಕೈಗೊಳ್ಳಬೇಕು.
ಅಗ್ನಿ ಶಾಮಕ ದಳದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಅಗ್ನಿ ಶಾಮಕ ದಳವು ಅತ್ಯಂತ ತ್ವರಿತವಾಗಿ ಸ್ಪಂದಿಸುವ ಅತ್ಯಾಧುನಿಕ ಉಪಕರಣಗಳನ್ನು ಬಳಸುವ ಕುರಿತು ಚಿಂತಿಸಬೇಕಾಗಿದೆ. ಇಂತಹ ಭೀಕರ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.





