ಶಿವಮೊಗ್ಗ: ಮಂಗಳಮುಖಿಯೊಬ್ಬರನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ ಪ್ರಕರಣ ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದ ಕೇವಲ 12 ಗಂಟೆಯೊಳಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಳೆ ಮಂಡ್ಲಿ ನಿವಾಸಿ ದೇವರಾಜ(27) ಬಂಧಿತ ಆರೋಪಿ ಎಂದು ತಿಳಿಯಲಾಗಿದೆ.
ರಾತ್ರಿ ಈ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಮಂಗಳಮುಖಿಯನ್ನು ಆಟೋದಲ್ಲಿ ನಗರದ ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿ ಕರೆದೊಯ್ದು ಅಲ್ಲಿ ಆಕೆಯಿಂದ 4,000 ರೂ. ನಗದು, ಒಂದು ಮೊಬೈಲ್ ಫೋನ್, ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ. ಈ ಸಂಬಂಧ ಎ.25ರಂದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಎನ್ಎಸ್ ಕಲಂ 309(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿ ದೇವರಾಜನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನಿಂದ 20,000 ರೂ. ಮೌಲ್ಯದ ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಹಾಗೂ ಒಂದು ಚಾಕು ಸೇರಿದಂತೆ ಒಟ್ಟು 3,20,000 ರೂ. ಅಂದಾಜು ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನೋಬನಗರ ಪೊಲೀಸ್ ಠಾಣೆಯ ಪ್ರಭಾರ ಇನ್ ಸ್ಪೆಕ್ಟರ್, ಸುರೇಶ್ ಉಸ್ತುವಾರಿಯಲ್ಲಿ, ಪಿಎಸ್ಸೈ ತಿರುಮಲೇಶ್ ಜಿ. ನೇತೃತ್ವದಲ್ಲಿ ಸಿಬ್ಬಂದಿಯಾದ ರಾಜು ಕೆ.ಆರ್., ಚಂದ್ರ ನಾಯ್ಕ ಬಿ., ವಿಜಯಕುಮಾರ್ ಹಾಗೂ ಮನುಶಂಕರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





