ಪಡುಬಿದ್ರಿ: ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದ ವ್ಯಕ್ತಿಯೊಬ್ಬರು ಬಳಿಕ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನಾ ಗ್ರಾಮದ ನಿವಾಸಿ ಕಿಟ್ಟ ಪೂಜಾರಿ (54) ಅವರು ಜೂನ್ 3ರಂದು ಬೆಳಿಗ್ಗೆ ಸುಮಾರು 7:30 ಗಂಟೆಗೆ ಚಹಾ ಕುಡಿದು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟಿದ್ದರು. ಸುಮಾರು ಹತ್ತು ನಿಮಿಷಗಳ ಬಳಿಕ ಮನೆಗೆ ಮರಳಿ ಬಂದ ಅವರು ಸ್ವಲ್ಪ ಸಮಯ ಮನೆಯಲ್ಲೇ ಕುಳಿತಿದ್ದರು ಎಂದು ತಿಳಿದುಬಂದಿದೆ.
ನಂತರ ಅವರ ಪುತ್ರ ಅನೀಶ್ (17) ಅವರ ತಾಯಿ ಗುಣಾವತಿ ಅವರು ಬಟ್ಟೆ ಒಗೆಯಲು ಹೊರಗೆ ಹೋಗಿ ವಾಪಾಸು ಬಂದಾಗ ಕಿಟ್ಟ ಪೂಜಾರಿ ಮನೆಯಲ್ಲಿ ಕಾಣಿಸಿರಲಿಲ್ಲ. ಕುಟುಂಬದವರು ಹಾಗೂ ನೆರೆಹೊರೆಯವರು ಸುತ್ತಮುತ್ತ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ.
ಬೆಳಿಗ್ಗೆ ಸುಮಾರು 9:45 ಗಂಟೆಗೆ ಮನೆಯ ಹಿಂಭಾಗಕ್ಕೆ ಹೋದಾಗ ಕೊಟ್ಟಿಗೆಯ ಬಾಗಿಲು ತೆರೆದಿರುವುದು ಕಂಡುಬಂದಿದ್ದು, ಒಳಗೆ ಪರಿಶೀಲಿಸಿದ ವೇಳೆ ಕಿಟ್ಟ ಪೂಜಾರಿ ಅವರು ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




