ಮುಂಬಯಿ : ಶನಿವಾರ ಮುಂಬೈನಲ್ಲಿ ಭಾರಿ ಮಳೆಯಾಗಿದ್ದು, ನಗರದ ಕೆಲವು ಭಾಗಗಳು ಜಲಾವೃತವಾಗಿದೆ. ಅಲ್ಲದೇ ವಿವಿಧ ಪ್ರದೇಶದಲ್ಲಿ ಭೂಕುಸಿತವೂ ಎದುರಾಗಿದೆ. ಭಾರೀ ಮಳೆಯಿಂದ ಭೂಕುಸಿತ ಸೃಷ್ಟಿಯಾಗಿದ್ದು ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ದಕ್ಷಿಣ ಭಾರತ ಸೇರಿದಂತೆ ದೇಶದಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ವಿವಿಧ ಭಾಗದಲ್ಲಿ ರೆಡ್ & ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂಬೈನ ಕೆಲವು ಪ್ರಮುಖ ಪ್ರದೇಶಗಳಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ 200 ಮಿ.ಮೀ ಮಳೆಯಾಗಿದೆ. ಮುಂಬೈನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಕೆಲವೇ ಗಂಟೆಳಲ್ಲಿ ಸುರಿದ ಮಳೆಯಿಂದಾಗಿ ಮುಂಬೈನ ಹಲವು ಪ್ರದೇಶಗಳ ರಸ್ತೆಗಳು ಜಲಾವೃತವಾಗಿವೆ. ಅಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ರೈಲು ಹಾಗೂ ವಿಮಾನಗಳ ಸಂಚಾರದಲ್ಲೂ ವ್ಯತ್ಯಾಸವಾಗಿದೆ.
ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗುತ್ತಿದೆ. ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಛತ್ತೀಸ್‌ಗಢ ಹಾಗೂ ಸಮೀಪದ ಪ್ರದೇಶಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದ್ದು ಇದು ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಕ್ರಮೇಣ ದುರ್ಬಲಗೊಂಡು ಆಗಸ್ಟ್ 18ರ ವೇಳೆಗೆ ಸೈಕ್ಲೋನಿಕ್ ಪರಿಚಲನೆಯಾಗಿ ಗುಜರಾತ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಇನ್ನು ಮುಂದಿನ 7 ದಿನಗಳಲ್ಲಿ ಗೋವಾ, ಮಹಾರಾಷ್ಟ್ರ (ಮುಂಬೈ ಸೇರಿದಂತೆ), ಗುಜರಾತ್ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂಬೈ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಾಟ್ ಪ್ರದೇಶದಲ್ಲಿ ಆಗಸ್ಟ್ 16 -19 ರ ಅವಧಿಯಲ್ಲಿ, ಗುಜರಾತ್ ಪ್ರದೇಶದಲ್ಲಿ ಆಗಸ್ಟ್ 16 ಮತ್ತು ಆಗಸ್ಟ್ 18 -20 ರ ಅವಧಿಯಲ್ಲಿ; ಸೌರಾಷ್ಟ್ರದಲ್ಲಿ ಆಗಸ್ಟ್ 19 ಮತ್ತು 20 ರಂದು ಆಗಸ್ಟ್ 16 ಮತ್ತು 19 ಮತ್ತು 20 ರಂದು ಭಾರೀ ಮಳೆ ಆಗಲಿದೆ.
ಮುಂದಿನ 4-5 ದಿನಗಳಲ್ಲಿ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 16 ಮತ್ತು 17 ರಂದು ತೆಲಂಗಾಣದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. 18 ಮತ್ತು 19 ರಂದು ಕರಾವಳಿ ಕರ್ನಾಟಕ, ಆಗಸ್ಟ್ 18 ರಂದು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಉಲ್ಲೇಖಿಸಿದೆ.
ಆಗಸ್ಟ್ 18 ರ ಸುಮಾರಿಗೆ ಒಡಿಶಾ ಕರಾವಳಿಯ ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಹೊಸದಾಗಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣವಾಗುವ ಸಾಧ್ಯತೆ ಇದೆ. ಇದು ಪೂರ್ವ ಮತ್ತು ಮಧ್ಯ ಭಾರತದಲ್ಲಿ ಮಳೆ ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ.