ಉಡುಪಿ: ಉಡುಪಿ ಜಿಲ್ಲೆಯ ಆರ್.ಟಿ.ಓ. ಕಚೇರಿಯಲ್ಲಿ ಸುಮಾರು 8 ತಿಂಗಳಿನಿಂದ ವಾಹನದ ನಿರಾಕ್ಷೇಪಣಾ ಪತ್ರ (ಸಿಸಿ) ನೀಡದೆ ಸತಾಯಿಸುತ್ತಿದ್ದು, ಇದರಿಂದ ಸಾವಿರಕ್ಕೂ ಹೆಚ್ಚು ನಿರಾಕ್ಷೇಪಣಾ ಪತ್ರದ ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ. 15 ದಿನಗಳೊಳಗೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿಕೊಡಬೇಕು ಎಂದು ಕರವೇ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ತಿಳಿಸಿದರು.
ಈ ಕುರಿತು ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಟಿ ಓ ಅಧಿಕಾರಿಗಳು ವಾಹನದ ಸಿ.ಸಿ ನೀಡದೆ ಜನಸಾಮಾನ್ಯರನ್ನ ಅಲೆದಾಡಿಸುತ್ತಿದ್ದಾರೆ. ಮಾತ್ರವಲ್ಲದೆ ಇಂದು ಜನಸಾಮಾನ್ಯರು ಆರ್ ಟಿ ಓ ಕಚೇರಿಗೆ ತೆರಳಿದರೆ ಅಲ್ಲಿನ ಗೋಡೆ ಸಹ ಲಂಚ ಕೇಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ನಿರಕ್ಷೇಪನ ಪತ್ರದ ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ. ಕೂಡಲೇ ಸರಕಾರ, ಜಿಲ್ಲಾಡಳಿತ, ಉಡುಪಿಯ ಶಾಸಕರು, ಸಂಬಂಧ ಪಟ್ಟ ಇಲಾಖೆಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ವಿವಿಧ ಪದಾಧಿಕಾರಿಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಆರ್ ಟಿ ಓ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕರವೇ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್ ಮಾತನಾಡಿ, ಈ ಸಮಸ್ಯೆಯ ಬಗ್ಗೆ ಆರ್.ಟಿ.ಓ ಅಧಿಕಾರಿಗಳಲ್ಲಿ ಕೇಳಿದಾಗ 2020 ಕ್ಕಿಂತ ಮೊದಲಿನ ವಾಹನದ ಆರ್.ಸಿ. ಪತ್ರದಲ್ಲಿ ವೀಲ್ ಬೇಸ್ ಹಾಗೂ ಎಚ್.ಪಿ ಅನ್ನು ನಮೂದಿಸಿಲ್ಲ. ಹಾಗಾಗಿ ನಿರಾಕ್ಷೇಪಣಾ ಪತ್ರ ನೀಡಲು ಬರುವುದಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ. 2020ನೇ ಇಸವಿಗಿಂತ ಮೊದಲಿನ ವಾಹನಗಳ ಆರ್. ಸಿ ಪತ್ರದಲ್ಲಿ ಬಿಟ್ಟುಹೋಗಿರುವ ವಿಚಾರಗಳನ್ನು ನಮೂದಿಸುವ ಜವಾಬ್ದಾರಿ ಸರಕಾರದ್ದು. ಅಥವಾ ಸಂಬಂಧಪಟ್ಟ ಇಲಾಖೆಯದ್ದು. ಇವರುಗಳ ಬೇಜವಾಬ್ದಾರಿಯಿಂದ ಆಗಿರುವ ಲೋಪದೋಷಕ್ಕೆ ವಾಹನ ಮಾಲೀಕರನ್ನು ಬಲಿಪಶು ಮಾಡುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
580 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಆರ್.ಟಿ.ಓ. ನಿರೀಕ್ಷಕರು ತಮ್ಮ ಮೊಬೈಲ್ ಆಪ್‌ನಲ್ಲಿಯೇ ಬಿಟ್ಟುಹೋಗಿರುವ ಅಂಶಗಳನ್ನು ತುಂಬಿಸಿ ಕೇವಲ 5 ದಿನಗಳಲ್ಲಿ ಪತ್ರವನ್ನು ತರಿಸಿಕೊಡುವ ಕೆಲಸವನ್ನು ಪಕ್ಕದ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಆರ್.ಟಿ.ಓ. ಅಧಿಕಾರಿಗಳಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಆರ್.ಟಿ.ಓ. ಅಧಿಕಾರಿಗಳು 15 ದಿನಗಳ ಒಳಗಡೆ ಬಾಕಿ ಇರುವ ಎಲ್ಲಾ ನಿರಾಕ್ಷೇಪಣಾ ಪತ್ರದ ಕಡತಗಳನ್ನು ವಿಲೇವಾರಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಆರ್.ಟಿ.ಓ. ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷರಾದ ಸೈಯದ್ ನಿಜಾಮ್, ಸುಧೀರ್ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಸತೀಶ್ ಸನಿಲ್, ಉಪಸ್ಥಿತರಿದ್ದರು.



