ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಕೊಡಮಾಡುವ 2026ನೇ ಸಾಲಿನ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಬರಹಗಾರ್ತಿ, ಕವಯತ್ರಿ ಶ್ರೀಮತಿ ವೈಲೆಟ್ ಪಿಂಟೋ ಇವರು ಆಯ್ಕೆಯಾಗಿದ್ದಾರೆ.
ಕುಂದಾಪುರ ಮೂಲದ ಶ್ರೀಮತಿ ವೈಲೆಟ್ ಪಿಂಟೋ ಇವರು ನಲ್ವತ್ತು ವರ್ಷಗಳಿಂದ ಬರವಣಿಗೆ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಹನಿಗವನಗಳು, ಚುಟುಕುಗಳು, ಕವನಗಳು, ಅಬಾಬಿಗಳು, ಹಾಯ್ಕುಗಳು, ನ್ಯಾನೋ ಕತೆಗಳು, ಲೇಖನಗಳು …ಇವರ ಲೇಖನಿಯಿಂದ ಹರಿದು ಬಂದ ಲಹರಿಗಳು. ಮಂಗಳ, ತರಂಗ, ಕರ್ಮವೀರ ವಾರ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರ ಕವನ ಸಂಕಲನ ” ಅರ್ಧ ಕೊಡ ನೀರು ” ಪ್ರಕಟಣೆಯಾಗಿದೆ. ಕೊಂಕಣಿಯಲ್ಲೂ ಕವನಗಳನ್ಮು ಬರೆಯುವ ಹವ್ಯಾಸ. ಕೊಂಕಣಿ ಕವನ ಸಂಕಲನ ಬಿಡುಗಡೆಯ ಹೊಸ್ತಿಲಲ್ಲಿ ಕಾದು ನಿಂತಿದೆ ! ಕನ್ನಡ ಉಪನ್ಯಾಸಕಿಯಾಗಿರುವ ಇವರು ಉತ್ತಮ ಅನುವಾದಕರೂ ಹೌದು. ಇಂಗ್ಲಿಷ್ ಭಾಷೆಯ ಸೈಂಟ್ ಇಗ್ನೇಷಿಯಸ್ ಲೊಯೆಲ್ಲಾರವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಕೊಂಕಣಿಯಿಂದ ಕನ್ನಡಕ್ಕೆ ಕವನಗಳನ್ನು ಅನುವಾದಿಸಿದ್ದಾರೆ. ಇಂಗ್ಲಿಷ್ ಹಿಂದಿಯಲ್ಲೂ ಕವನಗಳನ್ನು ಬರೆಯುವ ಪ್ರಯತ್ನ ವೂ ಸಾಗಿದೆ.ಹಾಸನದ ಆಕಾಶವಾಣಿ ಯಲ್ಲಿ ಮಹಿಳಾವಾಣಿ ವಿಭಾಗಕ್ಕೆ ಕೆಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಚಂದನ ದೂರದರ್ಶನ ದ ‘ಥಟ್ ಅಂತ ಹೇಳಿ” , ಸುವರ್ಣ ವಾಹಿನಿಯಲ್ಲಿ ಚಿತ್ರ ನಟಿ ಲಕ್ಷ್ಮಿಯವರು ನಡೆಸಿಕೊಟ್ಡ ” ನೀನಾ ನಾನಾ” ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.
ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಇವರು. ಉತ್ತಮ ಭಾಷಣಗಾರ್ತಿ ಕೂಡಾ.ಕಾರ್ಯಕ್ರಮ ನಿರೂಪಣೆಯಲ್ಲಿ ಎತ್ತಿದ ಕೈ. ದೇಶಪಾಂಡೆ ಪ್ರತಿಷ್ಠಾನ ಮತ್ತು ಮಂದಾರ ಸಾಹಿತ್ಯ ವೇದಿಕೆ ಬೀದರ್ ಇವರಿಂದ ‘ ಕಾವ್ಯ ಗಂಗೋತ್ರಿ” ಕಾವ್ಯ ಪ್ರಶಸ್ತಿ ಹಾಗೂಮಂಡ್ಯ ಬರಹಗಾರರ ವೇದಿಕೆಯಿಂದ “ಸಾಹಿತ್ಯ ಸಿರಿ”ಪ್ರಶಸ್ತಿಯು ಲಭಿಸಿದೆ.ಅಂತರ್ಜಾಲ ದಲ್ಲಿ ಸಾಹಿತ್ಯ ವೇದಿಕೆಯವರು ನಡೆಸಿಕೊಡುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.
ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಾರ್ಚ್15 ರಂದು ಅಪರಾಹ್ನ 2 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ ಕುಂದರ್, ಕಾರ್ಯಾದರ್ಶಿಯಾದ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಪಿಡಿಓ ರವೀಂದ್ರ ರಾವ್ ಕಾರ್ಯದರ್ಶಿ ಸುಮತಿ ಅಂಚನ್, ಕಾರ್ಯಕ್ರಮದ ನಿರ್ದೇಶಕರಾದ ಸುಶೀಲ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



