ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಅವರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಲ್ಪೆ ಬೀಚ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕುರಿತು ನಿರ್ಮಿತಿ ಕೇಂದ್ರವು ಯೋಜನಾ ಕಾಮಗಾರಿಗಳ ನೀಲನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ಪ್ರಸ್ತುತ ಪಡಿಸಿದ್ದು, ಮಲ್ಪೆಯ ಹಾಲಿ ಇರುವ ಬೀಚ್, ಬೀಚ್ ಉತ್ತರ ಭಾಗದಲ್ಲಿರುವ ಜಾಗವನ್ನು ಸ್ವಾಧೀನಪಡಿಸಿಕೊಂಡು ವಲಯವಾರು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ ಹಾಗೂ ಸೈಂಟ್ ಮೇರೀಸ್ ದ್ವೀಪದಲ್ಲಿಯೂ ಅಭಿವೃದ್ಧಿ ಪಡಿಸಲು ಇದರಲ್ಲಿ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಅನುದಾನದ ಲಭ್ಯತೆಯನ್ನು ಆಧರಿಸಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಿ ಕೈಗೊಳ್ಳಲಾಗುವುದು ಎಂದರು.
ಪ್ರವಾಸಿಗರು ಬೋಟ್ ಗಳಲ್ಲಿ ಸಂಚರಿಸುವಾಗ ಲೈಫ್ ಜಾಕೆಟ್ ಅನ್ನು ತಪ್ಪದೆ ಧರಿಸಿ ಪ್ರಯಾಣಿಸಬೇಕು. ತಪ್ಪಿದ್ದಲ್ಲಿ ಅಂತಹವರ ಮೇಲೆ ದಂಡ ವಿಧಿಸಲಾಗುವುದು ಎಂದ ಅವರು, ಲೈಫ್ ಜಾಕೆಟ್ ಧರಿಸಿದರೆ ಮಾತ್ರ ಬೋಟ್‌ಗಳ ಮಾಲೀಕರು ಬೋಟ್ ಚಲಾಯಿಸಬೇಕು. ಈ ಬಗ್ಗೆ ಕರಾವಳಿ ಕಾವಲು ಪಡೆಯವರು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಕಡಲ ತೀರಗಳಾದ ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣೆಯ ಉದೇಶಕ್ಕಾಗಿ ವಾಚ್ ಟವರ್ ನಿರ್ಮಾಣ, ಹೊರ್ಡಿಂಗ್ ಬೋರ್ಡ್ ಅಳವಡಿಕೆ, ಮಾಹಿತಿ ಫಲಕ, ಸಾರ್ವಜನಿಕ ಸೂಚನಾ ಫಲಕ, ಎಚ್ಚರಿಕೆಯ ಫಲಕ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



