Home Latest ಹಿರಿಯಡ್ಕ:  ಪಾದಾಚಾರಿಗೆ ಕಾರು ಡಿಕ್ಕಿ : ಚಾಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು..!

ಹಿರಿಯಡ್ಕ:  ಪಾದಾಚಾರಿಗೆ ಕಾರು ಡಿಕ್ಕಿ : ಚಾಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವು..!

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯಡ್ಕ–ಕಾರ್ಕಳ ರಸ್ತೆಯ ಕೋಟ್ನಕಟ್ಟೆ ಬಸ್ ತಂಗುದಾಣದ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ.

ಏಪ್ರಿಲ್ 19ರಂದು ಬೆಳಗ್ಗೆ ಸುಮಾರು 08:30 ಗಂಟೆ ವೇಳೆಗೆ,  ಮಂಜುನಾಥ್‌ ಎನ್ನುವವರು  ಕಾರಿನಲ್ಲಿ ತನ್ನ ಪತ್ನಿ ಸುನಂದ (53) ಹಾಗೂ ಮಗ ಮುರಳೀಧರ ಅವರನ್ನು ಕೂರಿಸಿಕೊಂಡು ಕೊಂಡಾಡಿ ಕಡೆಯಿಂದ ಹಿರಿಯಡ್ಕ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದ ಮಂಜುನಾಥ್‌, ಕೋಟ್ನಕಟ್ಟೆ ಬಸ್ ತಂಗುದಾಣ ದಾಟಿದ ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಜಯ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ಪರಿಣಾಮ ಜಯ ಅವರಿಗೆ ತಲೆ ಮತ್ತು ಮುಖ ಭಾಗಕ್ಕೆ ಗಾಯಗಳಾಗಿದ್ದು, ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾರೆ. ಇದೇ ವೇಳೆ ಕಾರು ಚಾಲಕ ಮಂಜುನಾಥ್‌ ಕೂಡ ಅಸ್ವಸ್ಥಗೊಂಡಿದ್ದು, ಪತ್ನಿ ಹಾಗೂ ಮಗ ಸ್ಥಳೀಯರ ಸಹಾಯದಿಂದ ಅವರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ನೀಡಿದ ವೈದ್ಯರು ಮಂಜುನಾಥ್‌ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.