ಕಾರ್ಕಳ: ಮಾಳ-ನೂರಾಳ್‌ಬೆಟ್ಟು ಗ್ರಾಮಗಳನ್ನು ಸಂಪರ್ಕಿಸುವ ಕಾರ್ವೆದಡಿ ಕಾಲುಸಂಕ ಕುಸಿದು ನೀರು ಪಾಲಾಗಿದ್ದು, 20ಕ್ಕೂ ಅಧಿಕ ಮನೆಗಳ ಜನರು ಮಾಳ ಗ್ರಾಮದ ಸಂಪರ್ಕ ಕಡಿದುಕೊಂಡಿದ್ದಾರೆ.
ಈ ಹಿಂದೆ ನಕ್ಸಲ್ ಬಾಧಿತ ಪ್ರದೇಶವೆಂದು ಗುರುತಿಸಿಕೊಂಡಿದ್ದ ಈದು ಗ್ರಾ.ಪಂ. ವ್ಯಾಪ್ತಿಗೆ ಬರುವ ನೂರಾಳ್‌ಬೆಟ್ಟಿನಿಂದ ಮಾಳಕ್ಕೆ ಸಂಪರ್ಕಿಸುವ ಸೇತುವೆ ಇದಾಗಿದ್ದು, ಭಾರೀ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಈಗ ಶಾಲೆ-ಕಾಲೇಜಿಗೆ ಹೋಗುವವರು, ಹೈನುಗಾರಿಕೆಯಲ್ಲಿ ತೊಡಗಿರುವವರು ಹಾಲಿನ ಕೇಂದ್ರಗಳಿಗೆ ಹಾಗೂ ಇತರರು ತಮ್ಮ ಕೆಲಸಗಳಿಗೆ ಹೋಗಲು ಸುಮಾರು 2 ಕಿ.ಮೀ. ಹೆಚ್ಚುವರಿ ಸುತ್ತಿ ಬಳಸಿ ಹೋಗಬೇಕಾಗಿದೆ.
ಈಗ ಇರುವ ರಸ್ತೆಯೂ ಅಲ್ಲಲ್ಲಿ ಹದಗೆಟ್ಟಿದ್ದು, ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಭಾಗದ ಜನರು ಅಂಗಡಿ ವ್ಯಾಪಾರ, ಆಸ್ಪತ್ರೆ ಮೊದಲಾದ ತುರ್ತು ಸಂದರ್ಭಗಳಲ್ಲಿ ಮಾಳವನ್ನೇ ನೆಚ್ಚಿಕೊಂಡಿದ್ದು, ಈಗ ಸಮಸ್ಯೆಯಾಗಿದೆ.
2008ರಲ್ಲಿ ನಿರ್ಮಿಸಲಾಗಿದ್ದ ಈ ಕಾಲುಸಂಕವು ನಿರಂತರ ನದಿಯ ಸೆಳೆತಕ್ಕೆ ಸಿಲುಕಿ ಶಿಥಿಲಗೊಂಡಿತ್ತು. ಈ ಬಾರಿ ನದಿ ನೀರು ಉಕ್ಕಿ ಹರಿದು ಸಂಪೂರ್ಣ ಶಿಥಿಲಗೊಂಡು ಕೊಚ್ಚಿಹೋಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯ ಗ್ರಾ.ಪಂ., ಜಿ.ಪಂ. ಜಿಲ್ಲಾಡಳಿತ, ಸರಕಾರ ಕೂಡಲೇ ಗಮನಹರಿಸಿ ಹೊಸ ಸೇತುವೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.