Home Crime ಗ್ರಾಹಕ ನ್ಯಾಯಾಲಯದ ಆದೇಶ ಉಲ್ಲಂಘನೆ : ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ…!

ಗ್ರಾಹಕ ನ್ಯಾಯಾಲಯದ ಆದೇಶ ಉಲ್ಲಂಘನೆ : ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ…!

ಉಡುಪಿ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಪಾಲಿಸದೆ ವಂಚಿಸಿದ ಆರೋಪದ ಮೇಲೆ ಎದುರುದಾರ ಅಮೃತ್ ಶೆಣೈ ಅವರಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ದೂರುದಾರರಾದ ಸಂತೋಷ್ ಪೈ ಅವರು ಅಮೃತ್ ಶೆಣೈ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಆಯೋಗವು (ಸಿ.ಸಿ. ನಂಬ್ರ : 76/2023), ವೈಗರ್ ಅಪಾರ್ಟ್‌ಮೆಂಟ್‌ನಲ್ಲಿನ ಮನೆ ನಂಬ್ರ 304 ಅನ್ನು ದೂರುದಾರರ ಹೆಸರಿಗೆ ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡಬೇಕು, ಇಲ್ಲವೇ 27,20,000/- ರೂಪಾಯಿಗಳನ್ನು ಶೇಕಡಾ 9ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು. ಆದರೆ, ಎದುರುದಾರ ಅಮೃತ್ ಶೆಣೈ ಅವರು ಆಯೋಗದ ಈ ಆದೇಶವನ್ನು ಪಾಲಿಸಿರಲಿಲ್ಲ.

ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಸಂತೋಷ್ ಪೈ ಅವರು ಜಾರಿ ದಾವೆ (Execution Case No: 31/2024) ಹೂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸೆಕ್ಷನ್ 72ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿ ಜೂನ್ 24, 2026 ರಂದು ತೀರ್ಪು ಪ್ರಕಟಿಸಿತು.

ಆರೋಪಿಗೆ 3 ವರ್ಷಗಳ ಸಾಧಾರಣ ಜೈಲು ಶಿಕ್ಷೆ.

1,00,000/- ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 6 ತಿಂಗಳ ಸಾಧಾರಣ ಶಿಕ್ಷೆ.:

ಆದೇಶದ ಬೆನ್ನಲ್ಲೇ ಆಯೋಗವು ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದರಂತೆ ಜೂನ್ 25, 2026ರಂದು ಆರೋಪಿ ಅಮೃತ್ ಶೆಣೈ ಅವರನ್ನು ಬಂಧಿಸಿ ಆಯೋಗದ ಮುಂದೆ ಹಾಜರುಪಡಿಸಲಾಯಿತು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಮಾನ್ಯ ಆಯೋಗವು, ಆತನನ್ನು ಹಿರಿಯಡ್ಕ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದೆ.