ಕುಂದಾಪುರ: ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಓಡಿಸಿದ್ದ ಅಪ್ಪು ಕೋಣ ಶುಕ್ರವಾರ (ಆ.8) ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ ಕಾಂತಾರ ಚಿತ್ರ ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದ ಆರಂಭದಲ್ಲಿ ಕಂಬಳದ ದೃಶ್ಯವೊಂದಿದೆ. ಅದರಲ್ಲಿ ರಿಷಭ್ ಶೆಟ್ಟಿ ಅವರು ಕಂಬಳ ಕೋಣಗಳನ್ನು ಓಡಿಸುತ್ತಾರೆ. ಇದರಲ್ಲಿ ಕಾಣಿಸಿಕೊಂಡಿದ್ದ ಕೋಣ ಇದೀಗ ಮೃ ತಪಟ್ಟಿದೆ.
ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರ ಅಪ್ಪು ಎಂಬ ಕೋಣ ಇಂದು ಸಾವನ್ನಪ್ಪಿದೆ. ಕಾಂತಾರ ಚಿತ್ರದಲ್ಲಿ ಅಪ್ಪು ಮತ್ತು ಬೋಳಂಬಳ್ಳಿಯ ಮತ್ತೊಂದು ಕೋಣ ಕಾಣಿಸಿಕೊಂಡಿದ್ದವು.
ಕುಂದಾಪುರದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮೂಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿದ್ದವು.
ಇದೀಗ ಅಪ್ಪು ಕೋಣ ಕೊನೆಯುಸಿರೆಳೆದಿದ್ದು, ಅಪ್ಪುವಿನ ನಿಧನಕ್ಕೆ ಕಂಬಳ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
