ಕೋಟ: ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಬುಕ್ಕಿಂಗ್ ಮಾಡಿ ತಿಂಗಳು ತನಕ ಗ್ಯಾಸ್ ಸಿಗುತ್ತಿಲ್ಲ ಹೀಗಾಗಿ ಸಾಕಷ್ಟು ಮಂದಿಗೆ ಸಮಸ್ಯೆಯಾಗುತ್ತಿದೆ ಎಂದು ಸಾಲಿಗ್ರಾಮ ಶ್ರೀನಿಧಿ ಎಂಟರ್‌ಪ್ರೈಸಸ್ ಮುಂದೆ ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟು ಗ್ರಾಹಕರು ಎ.16 ರಂದು ಗುರುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರತಾಪ್ ಶೆಟ್ಟಿ ಸಾಸ್ತಾನ ಮಾತನಾಡಿ ಮಾರ್ಚ್ ತಿಂಗಳಲ್ಲಿ ಗ್ಯಾಸ್ ಬುಕ್ ಮಾಡಿದ ಸಿಲಿಂಡರ್‌ಗಳು ಇನ್ನೂ ವಿತರಣೆಯಾಗಿಲ್ಲ. ಸುಮಾರು 45 ದಿನಗಳಾದರೂ ಗ್ಯಾಸ್ ಸಿಗದೆ ಬಡ ಕುಟುಂಬಗಳು, ಬಾಡಿಗೆ ಮನೆಯವರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಹೋಟೆಲ್ ಊಟವನ್ನು ಅವಲಂಬಿಸುವಂತಾಗಿದೆ. ಏಜೆನ್ಸಿಯವರನ್ನು ಪ್ರಶ್ನಿಸಿದರೆ ‘ಸ್ಟಾಕ್ ಇಲ್ಲ’ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಸಂಸದರು, ಆಹಾರ ಇಲಾಖೆಗೆ ಮನವಿ ಮಾಡಿ ಎನ್ನುತ್ತಾರೆ. ಆದರೆ ಯಾರೂ ಈ ಬಗ್ಗೆ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ನೂರಾರು ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಇತರ ಕಂಪನಿಗಳ (ಭಾರತ್ ಗ್ಯಾಸ್ ಇತ್ಯಾದಿ) ಸರಬರಾಜು ಸುಗಮವಾಗಿ ನಡೆಯುತ್ತಿದ್ದು, ಕೇವಲ ಈ ಏಜೆನ್ಸಿಯಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಸಮಸ್ಯೆ ಸರಿಯಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದರು.
ಗ್ರಾಹಕರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಏಜೆನ್ಸಿ ಮಾಲಕಿ ಭೋಜಮ್ಮ, ತಾಂತ್ರಿಕ ಪೂರೈಕೆಯ ಕೊರತೆಯನ್ನು ಬಿಚ್ಚಿಟ್ಟರು. “ನಮ್ಮ ಏಜೆನ್ಸಿಯಲ್ಲಿ 19 ಸಾವಿರ ಗ್ರಾಹಕರಿದ್ದಾರೆ. ನಿತ್ಯ 600 ಸಿಲಿಂಡರ್‌ಗಳ ಬೇಡಿಕೆ ಇದೆ. ಆದರೆ ನಮಗೆ ಪೂರೈಕೆಯಾಗುತ್ತಿರುವುದು ಕೇವಲ 342 ಸಿಲಿಂಡರ್‌ಗಳು ಮಾತ್ರ. ಸದ್ಯ 5 ರಿಂದ 6 ಸಾವಿರ ಗ್ರಾಹಕರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ನಾವು ಜಿಲ್ಲಾಡಳಿತಕ್ಕೆ ಸತತವಾಗಿ ಮನವಿ ಸಲ್ಲಿಸುತ್ತಿದ್ದರೂ ಪೂರೈಕೆ ಪ್ರಮಾಣ ಹೆಚ್ಚಾಗಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕೋಟ ಪೊಲೀಸ್ ಕ್ರೈಂ ವಿಭಾಗದ ಉಪನಿರೀಕ್ಷಕ ಮಹಾಂತೇಶ್ ಜಾಬ್ ಗೌಡ, ಬ್ರಹ್ಮಾವರ ತಾಲೂಕು ಕಚೇರಿಯ ಆಹಾರ ವಿಭಾಗದ ವಸಂತ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ಶ್ರೀಧರ್ ಹಾಗೂ ಗುಪ್ತವಾರ್ತೆ ವಿಭಾಗದ ಫಯಾಜ್ ಮೊದಲಾದವರು ಭೇಟಿ ನೀಡಿ ಏಜೆನ್ಸಿ ಮಾಲಕರೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು, ಪೂರೈಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾಗರಾಜ್ ಗಾಣಿಗ, ಅಂಥೋನಿ, ವಿಟ್ಠಲ ಪೂಜಾರಿ, ರಾಘವೇಂದ್ರ ಐರೋಡಿ, ಶಂಕರ ಕುಲಾಲ್, ಸುರೇಶ್ ಪಾಂಡೇಶ್ವರ, ಜಗನ್ನಾಥ ಬಂಗೇರ ಸೇರಿದಂತೆ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.





