ಹೊಸದಿಲ್ಲಿ : ದಿಲ್ಲಿ ಮೂಲದ ಉದ್ಯಮಿಯೊಬ್ಬರ 13 ವರ್ಷದ ಪುತ್ರ ಸಂದೀಪ್ ಬನ್ಸಾಲ್ ನ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿತವಾಗಿದ್ದ ಯೂಟ್ಯೂಬರ್ ಸಲೀಂ ವಾಸ್ತಿಕ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಈತನ ಬಂಧನದ ಬೆನ್ನಿಗೇ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧ ಚರ್ಚೆಗಳು ಭುಗಿಲೆದ್ದಿವೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್, ಸಲೀಂ ವಾಸ್ತಿಕ್ ಕುರಿತು ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಬಲಪಂಥೀಯ ವಲಯಗಳಲ್ಲಿ ಹೊಸ ಹೀರೋ ಆಗಿ ಹೊರಹೊಮ್ಮಿದ್ದ ಮಾಜಿ ಮುಸ್ಲಿಂ ಸಲೀಂ ವಾಸ್ತಿಕ್ ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ದಿಲ್ಲಿಯ ಉದ್ಯಮಿಯ ಪುತ್ರ ಸಂದೀಪ್ ಬನ್ಸಾಲ್ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ 1997ರಲ್ಲಿ ಅಪರಾಧಿ ಎಂದು ಘೋಷಿತವಾಗಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
2000ರಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಈತ ತಲೆಮರೆಸಿಕೊಂಡಿದ್ದ’ ಎಂದು ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಹಿಂದುತ್ವವಾದಿ ಗುಂಪಿನ ಒಂದು ವರ್ಗದ ಬೆಂಬಲ ಪಡೆದಿದ್ದ ಸಲೀಂ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ವಿಡಿಯೊಗಳನ್ನು ನಿರ್ಮಿಸುತ್ತಿದ್ದ. ಟಿವಿ ಚರ್ಚೆಗಳು ಹಾಗೂ ಯೂಟ್ಯೂಬ್ ಪಾಡ್ ಕಾಸ್ಟ್ ಗಳಲ್ಲಿ ಭಾಗವಹಿಸುತ್ತಿದ್ದ. ಕೆಲವು ಬಿಜೆಪಿ ಸಚಿವರು ಹಾಗೂ ಶಾಸಕರೊಂದಿಗೆ ಸಂಪರ್ಕ ಹೊಂದಿದ್ದನೆಂಬ ಆರೋಪಗಳೂ ಕೇಳಿಬಂದಿವೆ ಎಂದೂ ಹೇಳಿದ್ದಾರೆ.
ಈ ಸಂಪರ್ಕವನ್ನು ತನ್ನ ಬಗ್ಗೆ ವಿಶ್ವಾಸ ನಿರ್ಮಿಸಲು ಹಾಗೂ ಬಂಧನದಿಂದ ತಪ್ಪಿಸಿಕೊಳ್ಳಲು ಬಳಸಿಕೊಂಡಿರುವ ಸಾಧ್ಯತೆ ಇದೆ. ಬಹುಕಾಲ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅದನ್ನೇ ಮಾರ್ಗವೆಂದು ಆತ ಭಾವಿಸಿದ್ದಾನೆಂದು ತೋರುತ್ತದೆ. ಆದರೆ, ಬಲಪಂಥೀಯ ವಲಯಗಳಿಗೆ ಅಸಮಾಧಾನ ಉಂಟುಮಾಡುವ ಸಂಗತಿಯೆಂದರೆ, ಆತ ಹಿಂದೂವೊಬ್ಬನ ಹತ್ಯೆ ಪ್ರಕರಣದಲ್ಲಿ ಈಗ ಪೊಲೀಸರ ವಶದಲ್ಲಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ.
ಝುಬೈರ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆತ ಮುಸ್ಲಿಂ ಆಗಿದ್ದಾಗ ಅಪರಾಧ ಕೃತ್ಯವೆಸಗಿದ್ದ. ಮಾಜಿ ಮುಸ್ಲಿಂ ಆದ ಬಳಿಕ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರೆ, ಅಪರಾಧ ಕೃತ್ಯಗಳನ್ನು ನಡೆಸಿದಾಗ ಆತ ಕಟ್ಟಾ ಮುಸ್ಲಿಂ ಆಗಿದ್ದುದನ್ನು ಮರೆಯಬಾರದು ಎಂದು ಮತ್ತೊಬ್ಬರು ತಿರುಗೇಟು ನೀಡಿದ್ದಾರೆ.
ಇನ್ನೂ ಕೆಲ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿ, ತಲೆಮರೆಸಿಕೊಂಡಿರುವ ವ್ಯಕ್ತಿಯೊಬ್ಬ ಮಾಧ್ಯಮಗಳ ಗಮನ ಸೆಳೆಯುವುದಿಲ್ಲ. ಇಸ್ಲಾಂನಲ್ಲಿನ ಮೂಢನಂಬಿಕೆಗಳನ್ನು ವಿರೋಧಿಸಿ ಹೊರಬಂದ ಕಾರಣಕ್ಕೆ ಆತ ಗಮನಸೆಳೆದಿದ್ದಾನೆ. ತಪ್ಪಿತಸ್ಥನಾಗಿದ್ದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದ್ದಾರೆ.
ಮತ್ತೊಬ್ಬರು, ಹಿಂದೂಗಳಿಗೆ ಮುಸ್ಲಿಂ ಸಮುದಾಯದ ಅಪರಾಧಿಗಳು ವಿದ್ವಾಂಸರಂತೆ ಕಾಣುತ್ತಾರೆ. ತಮ್ಮ ಸೈದ್ಧಾಂತಿಕ ಉಳಿವಿಗಾಗಿ ಇಂಥವರನ್ನೇ ಅವಲಂಬಿಸುತ್ತಾರೆ ಎಂದು ಟೀಕಿಸಿದ್ದಾರೆ.





