
ಬೆಂಗಳೂರು: ನಟ ಮಯೂರ್ ಪಟೇಲ್ ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿ ತಡರಾತ್ರಿ ಸರಣಿ ಅಪಘಾತಕ್ಕೆ ಕಾರಣರಾಗಿದ್ದಾರೆ. ತಮ್ಮ ಫಾರ್ಚುನರ್ ಕಾರಿನಲ್ಲಿ ವೇಗವಾಗಿ ಬಂದು ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಮಯೂರ್ ಕುಡಿದು ಕಾರು ಓಡಿಸುತ್ತಿದ್ದರು. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ. ಆಗ ಅಲ್ಲೇ ಇದ್ದವರು ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ಮಯೂರ್ ಪಟೇಲ್ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ಕುಡಿದು ವಾಹನ ಚಲಾಯಿಸಿರುವುದು ಸಾಬೀತಾಗಿದೆ.
ಅಪಘಾತದ ಕುರಿತು ಶ್ರೀನಿವಾಸ್ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ. ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಯೂರ್ ಪಟೇಲ್ ಕಾರ್ ಸೀಜ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್ ಪಟೇಲ್ ಕಾರಿಗೆ ಇನ್ಸೂರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ.
ಅಪಘಾತ ಆಗುತ್ತಿದ್ದಂತೆ ಕಾರಿನಿಂದ ಇಳಿದ ಮಯೂರ್ ಪಟೇಲ್, ‘ಏನೇ ಇದ್ದರೂ ನಾನು ಮಾಡಿಸಿಕೊಡ್ತೀನಿ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.




