ಮಲ್ಪೆ: ಮಲ್ಪೆ ಬಂದರಿನ ಮೂರನೇ ಟೀ ಧಕ್ಕೆಯ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ.
ಕೊಡವೂರು ಗ್ರಾಮದ ಬಾಪುತೋಟ ನಿವಾಸಿ ಶಬ್ಬಿರ್ (32) ಅವರು ನೀಡಿದ ಮಾಹಿತಿಯಂತೆ, ಮಾ.6 ರಂದು ಸಂಜೆ ಸುಮಾರು 5:30 ಗಂಟೆಗೆ ಅವರು ಮನೆಯಲ್ಲಿ ಇದ್ದಾಗ ಮಲ್ಪೆಯ ಸಾರ್ವಜನಿಕರೊಬ್ಬರು ದೂರವಾಣಿ ಮೂಲಕ ಮಲ್ಪೆ ಬಂದರಿನ ಮೂರನೇ ಟೀ ಧಕ್ಕೆಯ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡುಬಂದಿರುವುದಾಗಿ ತಿಳಿಸಿದ್ದಾರೆ.
ಈ ಮಾಹಿತಿ ತಿಳಿದ ನಂತರ ಶಬ್ಬಿರ್ ಅವರು ಸಂಜೆ ಸುಮಾರು 6 ಗಂಟೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಧಕ್ಕೆಯ ನೀರಿನಲ್ಲಿ ಮುಗುಚಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಬಳಿಕ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆ ಎತ್ತಿ ಪರಿಶೀಲಿಸಿದಾಗ ಸುಮಾರು 35 ರಿಂದ 40 ವರ್ಷದೊಳಗಿನ ಅಪರಿಚಿತ ವ್ಯಕ್ತಿ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಕೆಂಪು ಬಣ್ಣದ ಅರ್ಧ ತೋಳಿನ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಬರ್ಮುಡಾ ಧರಿಸಿಕೊಂಡಿದ್ದು, ಸುಮಾರು 5 ಇಂಚು ಉದ್ದದ ಕೂದಲು ಹಾಗೂ ಫ್ರೆಂಚ್ ಸ್ಟೈಲ್ ಗಡ್ಡ ಹೊಂದಿರುವುದು ಕಂಡುಬಂದಿದೆ.
ಪ್ರಾಥಮಿಕವಾಗಿ ಈ ವ್ಯಕ್ತಿ ಮಾ.3 ರಿಂದ ಮಾ.6 ರ ನಡುವಿನ ಅವಧಿಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದಾಗ ಅಥವಾ ಬೋಟಿಗೆ ಹತ್ತುವ ವೇಳೆ ಆಕಸ್ಮಿಕವಾಗಿ ಧಕ್ಕೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



