Home Crime ರಾತ್ರಿ ಕಾರಲ್ಲಿ ಹೋಗುವಾಗ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನ…!

ರಾತ್ರಿ ಕಾರಲ್ಲಿ ಹೋಗುವಾಗ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನ…!

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ, ಮತ್ತೆ ಕಾರು ಹತ್ತುವ ವೇಳೆ ಅಪರಿಚಿತರು ಸುಲಿಗೆಗೆ ಯತ್ನಿಸಿದ ಘಟನೆ ಐವರ್ನಾಡು ಗ್ರಾಮದ ಪುತ್ತಿಲದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ನೀಲಗಿರಿ ಜಿಲ್ಲೆಯ ಗುಡಲೂರು ನಿವಾಸಿ ಅರುಣ್ ಕುಮಾರ್ ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ದಾಳಕ್ಕೆ ಪ್ರಯಾಣಿಸುತ್ತಿದ್ದಾಗ ರಾತ್ರಿ ಪುತ್ತಿಲ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ಇಳಿದಿದ್ದರು. ಈ ವೇಳೆ ವಿಶಿಲ್ ಶಬ್ದ ಕೇಳಿ ಬಂತು. ಬಳಿಕ ಕಾರಿಗೆ ಹತ್ತುವಾಗ ಕಲ್ಲೊಂದು ಕಾರಿನ ಮುಂಭಾಗದ ಗ್ಲಾಸ್‌ಗೆ ಬಿದ್ದು ಅದು ಒಡೆದು ಹೋಗಿದೆ.

ಈ ವೇಳೆ ಭಯಭೀತರದ ಅವರು ಕಾರು ಚಲಾಯಿಸಲು ಯತ್ನಿಸಿದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕಾಲರ್ ಹಿಡಿದು ಮುಖಕ್ಕೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ್ದಾರೆ. ಆಗ ಅವರು ಹೇಗೋ ತಪ್ಪಿಸಿಕೊಂಡು ಮುಂದೆ ತೆರಳಿ ರಸ್ತೆ ಬದಿಯಲ್ಲಿದ್ದವರಿಗೆ ಘಟನೆ ವಿವರಿಸಿದರು. 112 ಪೊಲೀಸ್‌ ಸಹಾಯವಾಣಿಗೂ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.