ಬೆಳಗಾವಿ: ಪ್ರಿಯಕರನ ಜೊತೆ ಪರಾರಿಯಾಗುವ ಉದ್ದೇಶದಿಂದ ಪತಿಯ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ನವವಿವಾಹಿತೆ ಹಾಗೂ ಆಕೆಯ ಪ್ರಿಯಕರರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಹಣಮಂತ ಮಾರಾಪೂರ ಹಾಗೂ ಹಸೀನಾ ನದಾಫ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹11 ಸಾವಿರ ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ದಿಲ್ಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ಕೃತ್ಯ ನಡೆದ ಕೇವಲ 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಹಸೀನಾ ಮೂಲತಃ ಮೂಡಲಗಿ ತಾಲೂಕಿನವಳಾಗಿದ್ದು, ಎರಡು ತಿಂಗಳ ಹಿಂದಷ್ಟೇ ಹೊಸಕೋಟಿ ಗ್ರಾಮದ ಶರೀಫ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಮದುವೆಯಾದ ಬಳಿಕವೂ ಆಕೆ ತನ್ನ ಪ್ರಿಯಕರ ಹಣಮಂತ ಮಾರಾಪೂರನೊಂದಿಗೆ ಸಂಪರ್ಕ ಮುಂದುವರಿಸಿಕೊಂಡಿದ್ದಳು ಎನ್ನಲಾಗಿದೆ.
ಪ್ರಿಯಕರನ ಜೊತೆ ಹೊಸ ಜೀವನ ಆರಂಭಿಸುವ ಉದ್ದೇಶದಿಂದ ಹಸೀನಾ, ಪತಿಯ ಮನೆಯಲ್ಲಿದ್ದ ಸುಮಾರು ₹21 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಕಟಕೋಳ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸ್‌ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




