ಉಡುಪಿ: ಕರಾವಳಿ ಭಾಗದಲ್ಲಿ ಹೊಸತುಳು ಸಿನಿಮಾ “90 ML” ಅದ್ಧೂರಿಯಾಗಿ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದು, ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಭರ್ಜರಿ ಚಾಲನೆ ಪಡೆದಿದೆ. ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ವಿನೀತ್ ಕುಮಾರ್, “ಈ ಸಿನಿಮಾದಲ್ಲಿ ಅಶ್ಲೀಲತೆ ಅಥವಾ ನೆಗೆಟಿವಿಟಿಗೆ ಅವಕಾಶ ನೀಡದೆ, ಕುಟುಂಬ ಸಮೇತವಾಗಿ ನೋಡಬಹುದಾದ ಹಾಸ್ಯಭರಿತ ಮನರಂಜನಾ ಕಥೆಯನ್ನು ನೀಡಿದ್ದೇವೆ” ಎಂದು ಹೇಳಿದರು.
ಚಿತ್ರದಲ್ಲಿ ವಿನೀತ್ ಕುಮಾರ್ ಹಾಗೂ ರುಹಾನಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ನಮಿತಾ, ಶೈಲಾಶ್ರೀ ಹಾಗೂ ಧೃತಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ನಟಿಸಿದ್ದಾರೆ.
ಡೋಲ್ಪಿ ಡಿ ಸೋಜ ನಿರ್ಮಾಣದ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಹಿಸಿಕೊಂಡಿದ್ದಾರೆ. ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದು, ಅರ್ಜುನ್ ಎಂ.ವಿ ಛಾಯಾಗ್ರಹಣ, ಸೃಜನ್ ಕುಮಾರ್ ತೋನ್ಸೆ ಸಂಗೀತ, ಸಚಿನ್ ರಾಮ್ ಸಂಕಲನ ಹಾಗೂ ಆಚಾರ್ಯ ಗುರು ಡಿಸೈನ್ ಮೂಲಕ ಚಿತ್ರದ ಗುಣಮಟ್ಟ ಹೆಚ್ಚಿಸಲಾಗಿದೆ.
ಪ್ರಸ್ತುತ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಸುರತ್ಕಲ್, ಪಡುಬಿದ್ರೆ, ಕಾರ್ಕಳ ಹಾಗೂ ದೇರಳಕಟ್ಟೆ ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಉಡುಪಿಯ ಕಲ್ಪನಾ ಭಾರತ್ ಹಾಗೂ ಮಣಿಪಾಲದಲ್ಲೂ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದ ಕುರಿತು ನಿರ್ದೇಶಕ ರಂಜಿತ್ ಸಿ. ಬಜಾಲ್ ಮಾತನಾಡಿ, “ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ ಮತ್ತು ಮನರಂಜನೆಯೊಂದಿಗೆ ಉತ್ತಮ ಕಥೆಯನ್ನು ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಪ್ರದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ನಟಿ ರುಹಾನಿ ಶೆಟ್ಟಿ ಹಾಗೂ ನಟ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.







