ಮುಂಬಯಿ : ಉಡುಪಿ ಜಿಲ್ಲೆಯ ಎಣ್ಣೆಹೊಳೆ ಗ್ರಾಮದವರಾದ ಮುಂಬೈನ ಪೊಲೀಸ್ ಅಧಿಕಾರಿ, ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದ ದಯಾ ನಾಯಕ್ ಅವರು ನಿವೃತ್ತರಾಗುತ್ತಿದ್ದು, ನಿವೃತ್ತಿಗೆ ಒಂದು ದಿನ ಮುನ್ನ ಅವರನ್ನು ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಪ್ರಮೋಟ್ ಮಾಡಲಾಗಿದೆ.
80 ಎನ್ ಕೌಂಟರ್ ಮಾಡಿ ಖ್ಯಾತಿಯ ಜೊತೆ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದ ದಯಾ ನಾಯಕ್ ಅವರು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ಆದರೆ, ಸಾಕ್ಷ್ಯಗಳ ಕೊರತೆಯಿಂದಾಗಿ ಬಿಡುಗಡೆಯಾಗಿದ್ದರು.
1995ರಲ್ಲಿ ಬಾಂಬೆ ಪೊಲೀಸ್ ಇಲಾಖೆಯಲ್ಲಿ ತರಬೇತುದಾರರಾಗಿ ಸಬ್-ಇನ್ಸ್‌ಪೆಕ್ಟರ್ ಹುದ್ದೆಯನ್ನು ಅಲಂಕರಿಸಿದ ಅವರು ತರಬೇತಿ ಬಳಿಕ 1996ರಲ್ಲಿ ಜುಹು ಪೊಲೀಸ್ ಠಾಣೆಗೆ ನಿಯೋಜಿಸಲ್ಪಟ್ಟರು. ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಅಂದರೆ 1996ರ ಡಿಸೆಂಬರ್ 31ರಂದು ರಾತ್ರಿ ದರೋಡೆಕೋರರ ಮೇಲೆ ಗುಂಡು ಹಾರಿಸಿ ಮೊದಲ ಎನ್‌ಕೌಂಟರ್ ಮಾಡಿದ್ದರು. ಈ ಬಳಿಕ ಅವರಿಗೆ ಎನ್‌ಕೌಂಟರ್ ದಯಾ ನಾಯಕ್ ಎನ್ನುವ ಹೆಸರು ಬಂದಿತ್ತು.
ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಮಂಗಳವಾರ ಭಡ್ತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರನ್ನು ಸಹ ಎಸಿಪಿಯನ್ನಾಗಿ ಮಾಡಲಾಗಿದೆ.
ದಯಾ ನಾಯಕ್ 1995ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಬಾಂದ್ರಾ ಘಟಕದ ಅಪರಾಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಯಾ ನಾಯಕ್ ಅವರ ಬಗ್ಗೆ ಚಲನಚಿತ್ರವನ್ನು ಕೂಡ ನಿರ್ಮಿಸಲಾಗಿದೆ. 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣವನ್ನು ದಾಖಲಿಸಿದ್ದು, ಬಳಿಕ ಅವರಿಗೆ ಕ್ಲೀನ್ ಚಿಟ್ ದೊರೆತಿತ್ತು. ದಯಾ ನಾಯಕ್ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ (ATS) ಕೂಡ ಕಾರ್ಯ ನಿರ್ವಹಿಸಿದ್ದಾರೆ.
ನಾಳೆ ದಯಾ ನಾಯಕ್ ಅವರು ನಿವೃತ್ತಿಯಾಗಲಿದ್ದಾರೆ. ವೈಯಕ್ತಿಕ ಜೀವನ ಏನೇ ಇರಲಿ, ನಿವತೃತ್ತಿ ಜೀವನ ಸುಖಕರವಾಗಿರಲಿ.