ಕೋಟ : ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣ ಆರೋಪಿಯಾಗಿದ್ದ ರಾಘವೇಂದ್ರ ಕಾಂಚನ್ ಜಾಮೀನು ಆದೇಶವನ್ನು ಕೋರ್ಟ್ ರದ್ದು ಮಾಡಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ : ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 15/2019 ಕಲಂ. 143, 147, 148, 447,341, 323, 307 302, 120(B),109, 112, 201, 212 ಜೊತೆಗೆ 149 ಐಪಿಸಿ ಅವಳಿ ಕೊಲೆ ಪ್ರಕರಣದಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರು ತನಿಖಾಧಿಕಾರಿಯಾಗಿದ್ದು, 1 ನೇ ಆಪಾದಿತ ರಾಜಶೇಖರ ರೆಡ್ಡಿ ಇವರನ್ನು ತನಿಖೆಗೆ ಒಳಪಡಿಸಿದಾಗ ಕೋಟತಟ್ಟು ಗ್ರಾಮದ ಬಾರಿಕೇರಿ ನಿವಾಸಿ ರಾಘವೇಂದ್ರ ಕಾಂಚನ್ @ ಬಾರಿಕೇರಿ ರಾಘು, ತಂದೆ: ಬಸವ ಮರಕಾಲ, ವಾಸ: ಬೆಟ್ಟಿನಮನೆ, ಬಾರಿಕೇರಿ ಕೋಟತಟ್ಟು ಅಂಚೆ ಮತ್ತು ಗ್ರಾಮ,ಬ್ರಹ್ಮಾವರ ತಾಲೂಕು ಈತನು ಈ ಕೊಲೆ ಕೃತ್ಯದ ಪ್ರಮುಖ ಆರೋಪಿತರಾದ ರಾಜಶೇಖರ ರೆಡ್ಡಿ, ಚಂದ್ರಶೇಖರ ರೆಡ್ಡಿ, ಹರೀಶ ರೆಡ್ಡಿ ಹಾಗೂ ಇತರರೊಂದಿಗೆ ಒಳ ಸಂಚು ನಡೆಸಿರುವುದು ತನಿಖೆಯ ಸಮಯ ತಿಳಿದು ಬಂದಿರುತ್ತದೆ. ಆಪಾದಿತ ರಾಘವೆಂದ್ರ ಕಾಂಚನ್ ಇವರನ್ನು ದಿನಾಂಕ 07/02/2019 ರಂದು 22.30 ಗಂಟೆಗೆ ವಶಕ್ಕೆ ಪಡೆದು ವರದಿಯೊಂದಿಗೆ ದಿನಾಂಕ 07/02/2019 ರಂದು 23.30 ಗಂಟೆಯ ಉಡುಪಿ ಉಪವಿಭಾಗ ಕಛೇರಿಯಲ್ಲಿ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ದಸ್ತಗಿರಿ ನಿಯಮ ಪಾಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಕಲಂ 143, 147, 148, 447, 341, 323, 307, 302, 120(B), 109, 112, 201, 212 ಜೊತೆಗೆ 149 ಐಪಿಸಿ ರಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ದೋಷಾರೋಪಣಾ ಪತ್ರವನ್ನು ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು SC No11/2024 ರಂತೆ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಪ್ರಸ್ತುತ ಕಲಂ 313 ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಆರೋಪಿ ಹೇಳಿಕೆಯ ಹಂತದಲ್ಲಿರುತ್ತದೆ. ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 9 ನೇ ಆರೋಪಿ ರಾಘವೇಂದ್ರ ಕಾಂಚನ್ @ ಬಾರಿಕೇರಿ ರಾಘು ಇವರು ದಿನಾಂಕ 23-06-2023 ರಂದು Criminal Petition No. 4439/2023 ರಂತೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ವಿಚಾರಣೆ ನಡೆಸಿ ದಿನಾಂಕ 28-06-2023 ರಂದು ಷರತ್ತು ಬದ್ಧ ಜಾಮೀನು ಆದೇಶವನ್ನು ನೀಡಿರುತ್ತದೆ.
ದಿನಾಂಕ: 31.05.2025 ರಂದು ಹಿಂದು ಜಾಗರಣಾ ವೇದಿಕೆ ಕೋಟಾ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಸದ್ರಿ ರಾಘವೇಂದ್ರ ಕಾಂಚನ್ @ ಬಾರಿಕೇರಿ ರಾಘು ಈತನು ರಿಯಾಜ್ ಪರಂಗಿಪೇಟೆ ಎಂಬವನು ಈ ಹಿಂದೆ ಸಭೆಯಲ್ಲಿ ಮಾತನಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸದ್ರಿ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಂಗಳೂರಿನಲ್ಲಿ ಕೋಮುದ್ವೇಷಕ್ಕೆ ಸಂಬಂಧಿಸಿದಂತೆ ಎರಡು ಕೊಲೆ ಪ್ರಕರಣಗಳು ದಾಖಲಾಗಿ, ಕಾನೂನು ಸುವ್ಯವಸ್ಥೆಗೆ ತೊಂದರೆಯಾದ ಬಗ್ಗೆ ತಿಳಿದಿದ್ದರೂ ಸಹ ಸದ್ರಿ ಭಾಷಣದ ತುಣುಕನ್ನು ರಾಘು ಬಾರಿಕೆರೆ ಎಂಬವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವ ಮೂಲಕ ಜಾತಿ ಮತ್ತು ಧರ್ಮಗಳ ನಡುವೆ ವೈರುತ್ವ ಮತ್ತು ಕೋಮು ಗಲಾಭೆ ಉಂಟು ಮಾಡಲು ಪ್ರೇರೆಪಿಸಿ ಪರಸ್ಪರ ಧರ್ಮಗಳ ನಡುವೆ ಕೋಮು ಗಲಾಭೆಗೆ ದುಷ್ಪೇರಣೆ ನೀಡಿರುತ್ತಾನೆ. ಈತನ ಈ ಅಪರಾಧಿಕ ಕೃತ್ಯದಿಂದ ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಹಾಗೂ ಆತನ ಕೃತ್ಯವನ್ನು ನಿಯಂತ್ರಿಸುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸದುದ್ದೇಶದಿಂದ ಆತನ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ 108/2025 ಕಲಂ: 196, 56 BNS ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದ್ರಿ ರಾಘವೇಂಧ್ರ ಕಾಂಚನ್ @ ಬಾರಿಕೇರಿ ರಾಘು ಈತನಿಗೆ ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಪಡೆಯದೇ ಉಡುಪಿ ಜಿಲ್ಲೆಯನ್ನು ಬಿಟ್ಟು ಹೊರಹೋಗದಂತೆ ಹಾಗೂ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದಂತೆ ಜಾಮೀನು ಆದೇಶದಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಈತನು ಘನ ಕರ್ನಾಟಕ ಉಚ್ಚ ನ್ಯಾಯಾಲಯದ ಜಾಮೀನು ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈತನಿಗೆ ಮಂಜೂರಾದ ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ಮಾನ್ಯ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ವರದಿಯನ್ನು ಅಂಗೀಕರಿಸಿ ಆರೋಪಿಗೆ ಮಾನ್ಯ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶ ನೀಡಿರುತ್ತದೆ.
ಹಾಗೇಯೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿ ಜಾಮೀನಿನ ಮೇಲೆ ಇರುವ ರೌಡಿ ಶೀಟರ್ ಹಾಗೂ ಇತರೆ ಆರೋಪಿಗಳಲ್ಲಿ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ರೌಡಿ ಶೀಟರ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದತಿಗಾಗಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ರವರು ಸೂಕ್ತ ಕ್ರಮ ಕೈಗೊಂಡಿರುತ್ತಾರೆ.
