Home Karnataka News ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ BMTC ಸಿಬ್ಬಂದಿ, ರಾಪಿಡೊ ಚಾಲಕ…!!

ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ BMTC ಸಿಬ್ಬಂದಿ, ರಾಪಿಡೊ ಚಾಲಕ…!!

ಬೆಂಗಳೂರು, ಏಪ್ರಿಲ್ 07: ಕೆಲ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಹೆಣ್ಣು ಮಕ್ಕಳ ಜತೆ ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ತಡರಾತ್ರಿ ಯುವತಿಗೆ ಸುರಕ್ಷತೆಗೆ ಬಿಎಂಟಿಸಿ ಸಿಬ್ಬಂದಿ ಮತ್ತು ರಾಪಿಡೊ ಚಾಲಕ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Karnatakaportfolio ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ತಮಗಾದ ಅನುಭವ ಹೇಳಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ, ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್‌ಪೋರ್ಟ್‌ನಿಂದ ಕಾಡುಗೋಡಿಗೆ ಬಂದು ಇಳಿದಿದ್ದಾರೆ. ತಡರಾತ್ರಿ 3 ಗಂಟೆ ಆಗಿತ್ತು. ಆದರೆ ಅವರ ಮನೆಗೆ ಕಾಡುಗೋಡಿ ಬಸ್ ನಿಲ್ದಾಣದಿಂದ 3 ಕಿಲೋ ಮೀಟರ್ ದೂರದಲ್ಲಿದ್ದ ಕಾರಣ ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ರೆಡಿ ಇರಲಿಲ್ಲ. ಟ್ಯಾಕ್ಸಿ ಬುಕ್‌ ಆಗುತ್ತಿರಲಿಲ್ಲ. ಹೀಗಾಗಿ ಟ್ಯಾಕ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ಸಹಾಯಕ್ಕೆ ಧಾವಿಸಿದ್ದಾರೆ. ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ಜೊತೆಯಲ್ಲೇ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವುದನ್ನು ಕಾಣಬಹುದು.

ಅದೇ ವೇಳೆ ಕ್ಯಾಬ್ ಹಾಗೂ ಟ್ಯಾಕ್ಸಿ ಬುಕ್ ಮಾಡಿದ್ರೂ ಬುಕ್‌ ಆಗಲಿಲ್ಲ. ಅಲ್ಲಿಗೆ ಬಂದ ರಾಪಿಡೋ ಡ್ರೈವರ್ ಬಳಿ ಮನೆಗೆ ಬಿಡುವಂತೆ ಕೇಳಿದ್ದಾರೆ. ಎಷ್ಟು ಚಾರ್ಚ್‌ ಆಗುತ್ತದೆ ಎಂದು ವಿಚಾರಿಸುತ್ತಿದ್ದಂತೆ ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್‌ನಲ್ಲಿ ಲೊಕೇಶನ್ ತೋರಿಸಿ, ಲೇಟ್ ಆಗಿದೆ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆ ತಲುಪಿದ ಬಳಿಕ ಐಶ್ವರ್ಯ ಅವರು ಹಣದ ಬಗ್ಗೆ ಕೇಳಿದಾಗ ‘ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಎಂದು ನಾನು ಕೇಳುವುದಿಲ್ಲ, ನಿಮಗೆ ಎಷ್ಟು ಅನಿಸುತ್ತದೋ ಅಷ್ಟನ್ನು ಕೊಡಿ ಎಂದು ಉತ್ತರ ನೀಡಿದ್ದಾರೆ. ಈ ಘಟನೆಯ ಬಗ್ಗೆ ವಿವರಿಸುತ್ತಾ ಅಪರಿಚಿತ ವ್ಯಕ್ತಿಗಳ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಸುರಕ್ಷಿತ ಎಂದು ಜನರು ಈಗ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನೊಬ್ಬರು, ಅತ್ಯುತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬೆಂಗಳೂರಿನಲ್ಲಿ ಹೃದಯವಂತರು ಅಸಂಖ್ಯಾತ ಜನರಿದ್ದಾರೆ ಎಂದು ಹೇಳಿದ್ದಾರೆ.