ಕಟಪಾಡಿ : ಉಡುಪಿ ಜಿಲ್ಲೆಯ ಅಜಿಲಕಾಡು ಫ್ರೆಂಡ್ಸ್ ಶಾಂತಿನಗರ ಇನ್ನಂಜೆ ಹಾಗೂ ಹೃದಯಂ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಏ.12 ರಂದು ಆಯೋಜಿಸಲಾಗಿದೆ.
ಶಿಬಿರವು ಏಪ್ರಿಲ್ 12 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಇನ್ನಂಜೆಯ ವಿಷ್ಣುಮೂರ್ತಿ ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಲಿದೆ.
ನಿಟ್ಟೆ ವಿಶ್ವವಿದ್ಯಾಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ತಜ್ಞ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ವಿವಿಧ ದಂತ ಚಿಕಿತ್ಸಾ ಸೇವೆಗಳನ್ನು ನೀಡಲಿದ್ದಾರೆ.
ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಆರೋಗ್ಯ ಕುರಿತು ಶಿಕ್ಷಣ, ಹಲ್ಲುಗಳ ಸ್ವಚ್ಛತೆ, ತಪಾಸಣೆ, ಹುಳುಕು ಹಲ್ಲುಗಳ ಭರ್ತಿ, ರೋಗಗ್ರಸ್ತ ಹಲ್ಲುಗಳನ್ನು ಕೀಳುವುದು ಸೇರಿದಂತೆ ಅಗತ್ಯ ಚಿಕಿತ್ಸೆಗಳು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸಲಹೆಗಳನ್ನು ನೀಡಲಾಗುತ್ತದೆ.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಯೋಜಕರಾದ ಅಜಿಲಕಾಡು ಫ್ರೆಂಡ್ಸ್ ನ ಅಧ್ಯಕ್ಷ ಸುಧಾಕರ್ ಪೂಜಾರಿ ಮತ್ತು ಹೃದಯಂ ಫೌಂಡೇಶನ್ ನ ಪ್ರವರ್ತಕ ಸುಭಾಷ್ ಸಾಲಿಯಾನ್ ಮನವಿ ಮಾಡಿದ್ದಾರೆ.
“ಶುಭ್ರ ಶುಚಿಯಾದ ಹಲ್ಲುಗಳ ಸುಂದರ ನಗು ಆರೋಗ್ಯದ ಸಂಕೇತ” ಎಂಬ ಸಂದೇಶದೊಂದಿಗೆ ಶಿಬಿರವನ್ನು ಆಯೋಜಿಸಲಾಗಿದೆ.




