Home Crime ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡೀಲಿಂಗ್ : ಜಾಗದ ವಿಚಾರದಲ್ಲಿ 10 ಲಕ್ಷ ಲಂಚಕ್ಕೆ ಡಿಮ್ಯಾಂಡ್, ಇಬ್ಬರು...

ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡೀಲಿಂಗ್ : ಜಾಗದ ವಿಚಾರದಲ್ಲಿ 10 ಲಕ್ಷ ಲಂಚಕ್ಕೆ ಡಿಮ್ಯಾಂಡ್, ಇಬ್ಬರು ಪಿಎಸ್ಐಗಳ ವಿರುದ್ಧ ಎಫ್ಐಆರ್…!!

ಬೆಂಗಳೂರು, : ರೂ.10 ಲಕ್ಷ ನೀಡುವಂತೆ ಲಂಚ ಕೇಳಿದ ಆರೋಪದಡಿ ಸುಬ್ರಮಣ್ಯಪುರ ಠಾಣೆಯ ಪಿಎಸ್ಐ ಭೈರಪ್ಪ ಹಾಗೂ ಕೆಂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಮುರುಳಿ ಮೋಹನ್ ವಿರುದ್ಧ ನಗರದ ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ಧಾರೆ.

ಪ್ರಶಾಂತ್ ನಗರದ ನಿವಾಸಿ ಶಿವಕುಮಾರ್ ಎಂಬವರು ನೀಡಿದ ದೂರು ಆಧರಿಸಿ, ಇಬ್ಬರು ಸಬ್ ಇನ್ಸ್ಪೆಕ್ಟರ್ಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಶಿವಕುಮಾರ್ 10 ಕಳೆದ ವರ್ಷಗಳಿಂದ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದಾರೆ. ಇವರ ಸಂಬಂಧಿ ಪುಟ್ಟಸ್ವಾಮಿ ಅವರಿಗೆ ಸೇರಿದ ನಿವೇಶನದ ಸುತ್ತ ನಿರ್ಮಾಣವಾಗಿದ್ದ ಗೋಡೆ ಒಡೆದು ಕೆಲ ವ್ಯಕ್ತಿಗಳು ನಿವೇಶನ ತನ್ನದೆಂದು ಅತಿಕ್ರಮಕ್ಕೆ ಮುಂದಾಗಿದ್ದರು. ಈ ಬಗ್ಗೆ ಅಸಮಾಧಾನಗೊಂಡ ಪುಟ್ಟಸ್ವಾಮಿ, ಮೋಸದಿಂದ ನಿವೇಶನ ಮಾರಾಟ ಮಾಡಿಸಿರುವುದಾಗಿ ಶಿವಕುಮಾರ್ ವಿರುದ್ಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತಪ್ಪು ತಿಳುವಳಿಕೆಯಿಂದ ದೂರು ನೀಡಿದ್ದು, ಪ್ರಕರಣವನ್ನು ಹಿಂಪಡೆಯುವುದಾಗಿ ಪುಟ್ಟಸ್ವಾಮಿ ಒಪ್ಪಿಕೊಂಡಿದ್ದರು ಎಂದು ದೂರಿನಲ್ಲಿ ಶಿವಕುಮಾರ್ ತಿಳಿಸಿದ್ದಾರೆ.

ನಿವೇಶನದ ಸುತ್ತ ಗೋಡೆ ಒಡೆದು ಹಾಕಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಬೈರಪ್ಪ ಅವರಿಗೆ ಮನವಿ ಮಾಡಿದ್ದೆ. ಈ ಕುರಿತು ಪಿಎಸ್ಐ ಮುರುಳಿ ಮೋಹನ್ ಅವರ ನಂಬರ್ ನೀಡಿ ಸಂಪರ್ಕಿಸುವಂತೆ ತಿಳಿಸಿದ್ದರು. ಕೆಂಗೇರಿ ಬಳಿಯ ಹೊಟೇಲ್ ವೊಂದರಲ್ಲಿ ಮುರುಳಿ ಅವರನ್ನ ಭೇಟಿ ಮಾಡಿದ್ದರು. ನಿವೇಶನ ವಿಚಾರವಾಗಿ ಭೈರಪ್ಪ ಎಲ್ಲವನ್ನು ಹೇಳಿದ್ದಾರೆ. ನಿವೇಶನವನ್ನು ನಿಮ್ಮ ಸುಪರ್ದಿಗೆ ಕೊಡಿಸಲು ಸಹಾಯ ಮಾಡುತ್ತೇನೆ. ಇದಕ್ಕಾಗಿ 10 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದು, ಅಡ್ವಾನ್ಸ್ 5 ಲಕ್ಷ ನೀಡುವಂತೆ ಒತ್ತಾಯಿಸಿದ್ದರು” ಎಂದು ದೂರಿನಲ್ಲಿ ಶಿವಕುಮಾರ್ ಉಲ್ಲೇಖಿಸಿದ್ದಾರೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.