Home Karavali Karnataka ಉಡುಪಿ: ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ : ಪ್ರಸಾದ್ ರಾಜ್ ಕಾಂಚನ್ ಕ್ಷಮೆ ಯಾಚಿಸಲಿ...

ಉಡುಪಿ: ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ : ಪ್ರಸಾದ್ ರಾಜ್ ಕಾಂಚನ್ ಕ್ಷಮೆ ಯಾಚಿಸಲಿ : ತುಳುನಾಡ ಧರ್ಮ ಜಾಗರಣ ವೇದಿಕೆ…!!

ಉಡುಪಿ: ತುಳುನಾಡಿನ ದೈವಾರಾಧನೆಯ ಭಾಗವಾದ ಕೋಳಿ ಅಂಕದ ಆಚರಣೆ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಅವಹೇಳನಕಾರಿ ಹೇಳಿಕೆ ನೀಡಿದ್ದು , ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಎಂದು ತುಳುನಾಡ ಧರ್ಮ ಜಾಗರಣ ವೇದಿಕೆ ಒತ್ತಾಯ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡರು ,ಕಳೆದ ಮಂಗಳವಾರ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸ್ಥಳೀಯ ಶಾಸಕರನ್ನು ಟೀಕಿಸುವ ವೇಳೆ ಉಡುಪಿಯ ಶಾಸಕರು ತುಳುನಾಡಿನ ಧಾರ್ಮಿಕ ಆಚರಣೆಯ ಭಾಗವಾದ ಸಾಂಪ್ರದಾಯಿಕ ಕೋಳಿ ಅಂಕ ಆಚರಣೆಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವ ಮೂಲಕ ಶಾಸಕರು ಉಡುಪಿ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಪ್ರಸಾದ್ ಕಾಂಚನ್ ಈ ಹೇಳಿಕೆಯಿಂದ ತುಳುನಾಡಿನ ದೈವಾರಾಧನೆಯ ಚೌಕಟ್ಟಿನ ರಕ್ತಹಾರದ ಕಲ್ಪನೆಯಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಂತಹ ಕೋಳಿ ಅಂಕ ಒಂದು ಜೂಜು ಎಂಬಂತೆ ಬಿಂಬಿಸಿ ನಮ್ಮ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.

ತುಳುನಾಡಿನ ಧಾರ್ಮಿಕ ಕೇಂದ್ರಗಳಾದ ದೈವಸ್ಥಾನ, ಗರೋಡಿ, ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವದ ಬಳಿಕ ದೈವಾರಾಧನೆಯ ಭಾಗವಾಗಿ ಕೋಳಿ ಅಂಕ ನಡೆದು ಕೊಂಡು ಬರುತ್ತಿದ್ದು, ಕೇವಲ ಕಳೆದ 2 ವರ್ಷಗಳಿಂದ ಪ್ರಾರಂಭ ಮಾಡಿದ್ದಲ್ಲ ಎಂಬುದನ್ನು ಪ್ರಸಾದ್ ಕಾಂಚನ್ ಮರೆತಿರುವಂತೆ ಕಾಣುತ್ತದೆ.

ಉಡುಪಿ ಶಾಸಕರು ಸ್ಥಳೀಯ ಪ್ರತಿನಿಧಿಯಾಗಿ ವಿವಿಧ ದೈವಸ್ಥಾನ, ಗರೋಡಿ, ದೇವಸ್ಥಾನಗಳ ಪ್ರಮುಖರು ತಮ್ಮ ಕೋಳಿ ಅಂಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದಾಗ ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನಾತ್ಮಕವಾಗಿ ಜೂಜು ರಹಿತವಾಗಿ ಕೋಳಿ ಅಂಕ ನಡೆಸಲು ಅವಕಾಶ ನೀಡುವಂತೆ ವಿಧಾನ ಸೌಧದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಪುತ್ತೂರು ಕಾಂಗ್ರೆಸ್ ಶಾಸಕರಾದ ಆಶೋಕ್ ರೈ, ಕಾರ್ಕಳ ಶಾಸಕ ಸುನೀಲ್ ಕುಮಾರ ಹಾಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ಸಹಮತ ಸೂಚಿಸಿದ್ದರೂ ಪ್ರಸಾದ್ ಕಾಂಚನ್ ಮಾತ್ರ ನಮ್ಮ ಈ ಸಾಂಪ್ರದಾಯಿಕ ಆಚರಣೆಯನ್ನು ಅವಮಾನಕಾರಿ ಎಂಬಂತೆ ಹೇಳುತ್ತಿರುವುದು ದುರ್ದೈವ.

ಪ್ರಸಾದ್ ಕಾಂಚನ್ ಈ ಅಪ್ರಬುದ್ಧ ಅವಹೇಳನಕಾರಿ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದ್ದು, ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇನ್ನಾದರೂ ತುಳುನಾಡಿನ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಕೆ ನೀಡುವಾಗ ಜಾಗೃತೆ ವಹಿಸಲಿ. ಇದೇ ಪ್ರವೃತ್ತಿ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.