ಮುಂಬೈ: ಯೆಸ್ ಬ್ಯಾಂಕ್‌ಗೆ 3,000 ಕೋಟಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ.
ಸುಮಾರು 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ (RAAGA)ನ 50 ಕಂಪನಿಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ದಾಳಿ ನಡೆಸಿರುವುದಾಗಿ ರೆಡ್‌ಬಾಕ್ಸ್ ಗ್ಲೋಬಲ್ ಇಂಡಿಯಾ X ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಯೆಸ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದ್ದ 2 ಎಫ್‌ಐಆರ್‌ಗಳನ್ನು ಆಧರಿಸಿ ಹಾಗೂ ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ತೀವ್ರ ಶೋಧ ನಡೆಸುತ್ತಿದೆ. 25ಕ್ಕೂ ಹೆಚ್ಚು ಮಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
2017 ಮತ್ತು 2019ರ ನಡುವೆ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಅಡಿಯಲ್ಲಿರುವ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ 3,000 ಕೋಟಿ ರೂ. ಸಾಲ ನೀಡಿತ್ತು. ಆದ್ರೆ ಈ ಸಾಲದ ಹಣವನ್ನ ಗ್ರೂಪ್‌ನ ಇತರ ಶೆಲ್ ಕಂಪನಿಗಳಿಗೆ (ಬೇನಾಮಿ ಕಂಪನಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್‌ಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನ ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಇಡಿ ಪತ್ತೆಹಚ್ಚಿದೆ. ಪ್ರಾಥಮಿಕ ತನಿಖೆಯಲ್ಲಿ ಇದಕ್ಕೆ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಅಂತ ಇಡಿ ಹೇಳಿದೆ.
ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಸರಿಯಾದ ಹಣಕಾಸು ಸ್ಥಿತಿ ಇಲ್ಲದ ಕಂಪನಿಗಳು, ಸಾಮಾನ್ಯ ನಿರ್ದೇಶಕರಿರುವ ಕಂಪನಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಸರಿಯಾಗಿ ಅವಲೋಕನ ಮಾಡುವ ಪ್ರಯತ್ನ ಆಗಿಲ್ಲ. ಸಾಲಕ್ಕೆ ಅನುಮೋದನೆ ಆಗುವ ಮುನ್ನವೇ ಅಥವಾ ಅದೇ ದಿನವೇ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಯೆಸ್ ಬ್ಯಾಂಕ್ನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಇಡಿ ಎತ್ತಿ ತೋರಿಸಿದೆ. ಇಡಿ ನೀಡಿರುವ ಮಾಹಿತಿ ಪ್ರಕಾರ ರಿಲಯನ್ಸ್ ಗ್ರೂಪ್ಗೆ ಸೇರಿದ 50 ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ಶೋಧ ಕಾರ್ಯ ಮುಂದುವರೆದಿದೆ.