ಉಡುಪಿ: ರಾಜ್ಯದಲ್ಲಿ ಕರ್ನಾಟಕ ಭಾಷಾ ನೀತಿಯೊಂದನ್ನು ಜಾರಿಗೆ ತರಬೇಕು ಎಂದು ಹೇಳಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಪಠ್ಯಕ್ರಮವನ್ನು ಸರಳಗೊಳಿಸುವುದರ ಅಗತ್ಯವಿದೆ ಎಂದಿದ್ದಾರೆ.
ತ್ರಿಭಾಷಾ ನೀತಿಯ ಬದಲಿಗೆ ದ್ವಿಭಾಷಾ ನೀತಿ ಜಾರಿಯಾಗಬೇಕು ಎಂಬ ಆಶಯ ಎಲ್ಲೆಡೆ ಕಂಡು ಬರುತ್ತಿದೆ. ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದ್ವಿಭಾಷಾ ನೀತಿಯತ್ತ ಒಲವು ಹೊಂದಿದ್ದಾರೆ. ಸರಕಾರದ ಮುಂದಿನ ನಿರ್ಧಾರವನ್ನು ಆಧರಿಸಿ ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಪಷ್ಟ ನಿರ್ಧಾರ ತಳೆಯಲಿದೆ ಅಥವಾ ಸಮಿತಿಯನ್ನು ರಚಿಸಲಿದೆ. ರಾಜ್ಯದಲ್ಲಿ ಇದರ ಜತೆಗೆ ಕರ್ನಾಟಕ ಭಾಷಾ ನೀತಿ ಜಾರಿಗೆ ಬರಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಚೆನ್ನಾಗಿದೆ. ತುಳು, ಕೊಂಕಣಿ, ಬ್ಯಾರಿ, ಕುಂದಾಪ್ರ ಕನ್ನಡ ಸಹಿತ ಹಲವು ಭಾಷೆಗಳ ಜತೆಗೆ ಕನ್ನಡವೂ ಚೆನ್ನಾಗಿದೆ. ಇಲ್ಲಿನ ಮಕ್ಕಳು ಎಸೆಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲೂ ಉತ್ತಮ ಅಂಕ ಪಡೆದಿದ್ದಾರೆ. ಆದರೆ ಈ ರೀತಿಯ ಪ್ರಾದೇಶಿಕ ಭಾಷೆ ಇಲ್ಲದ ಕಡೆ ಕನ್ನಡ ಭಾಷೆಯಲ್ಲಿ ಮಕ್ಕಳು ಕಡಿಮೆ ಅಂಕ ಪಡೆದಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಕಂಡು ಹಿಡಿಯುವುದಕ್ಕಾಗಿ ಪ್ರಾಧಿಕಾರವು ತೌಲನಿಕ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಿದೆ ಎಂದರು.
ಕನ್ನಡ ಹೊರತುಪಡಿಸಿ ಕರ್ನಾಟಕದಲ್ಲಿ 230 ಸಣ್ಣ ಸಣ್ಣ ಭಾಷೆಗಳಿವೆ. ಅವುಗಳ ಸಶಕ್ತೀಕರಣಕ್ಕೆ ಸಮಿತಿ ರಚಿಸಿದ್ದೇವೆ. ಆ ಸಮಿತಿ ಅಧ್ಯಯನ ವರದಿ ಸಲ್ಲಿಸಲಿದೆ. ಅನಂತರ ಸರಕಾರಕ್ಕೆ ಕೆಲವು ಶಿಫಾರಸು ಮಾಡಲಾಗುವುದು.
ಸೂಚನ ಫಲಕ, ಬ್ಯಾಂಕ್‌ಗಳಲ್ಲಿ ಕನ್ನಡ: ಸೂಚನೆ ಪ್ರವಾಸಿ ತಾಣಗಳಲ್ಲಿ ಕನ್ನಡ ಭಾಷೆಯ ಜತೆಗೆ ಸ್ಥಳೀಯವಾಗಿ ಅಗತ್ಯವಿರುವ ಭಾಷೆಗಳಲ್ಲಿ ಸೂಚನ ಫಲಕ ಹಾಗೂ ಆ ಸ್ಥಳದ ಮಾಹಿತಿ ಅಳವಡಿಸಲು ಇಲಾಖೆಗೆ ಸೂಚಿಸಿದ್ದೇವೆ. ಕೈಗಾರಿಕೆಗಳಲ್ಲಿ ಕನ್ನಡ ಮತ್ತು ಬೋರ್ಡ್‌ಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು. ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕ ಅಧಿಕಾರಿಯನ್ನು ನೇಮಿಸಿ ಸ್ಥಳೀಯವಾಗಿ ವ್ಯವಹರಿಸಲು ಅನುಕೂಲ ಮಾಡಿಕೊಡಲು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಉಡುಪಿಯಲ್ಲಿ ಶೀಘ್ರವೇ ಕನ್ನಡ ಭವನ ನಿರ್ಮಾಣ: ಉಡುಪಿ ಜಿಲ್ಲೆಯಲ್ಲಿ ಅತಿ ಶೀಘ್ರವೇ 5 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಆಗಲಿದೆ. ಅಗತ್ಯ ಇರುವ ಅನುದಾನವನ್ನು ಸರಕಾರದಿಂದಲೂ ಒದಗಿಸಲು ಮನವಿ ಮಾಡಲಿದ್ದೇವೆ. ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಆಡಳಿತದಲ್ಲಿ ಕಂಪ್ಯೂಟರೀಕರಣ ಮತ್ತು ಕಂಪ್ಯೂಟರೀಕರಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಕೆ.ಟಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ| ಸಂತೋಷ್, ಸದಸ್ಯ ಯಾಕೂಬ್ ಗುಲ್ವಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.