ಕೋಟ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಏಪ್ರಿಲ್ 2 ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಹಾಂತೇಶ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಕೋಟ ಪೊಲೀಸ್ ಠಾಣೆ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಸಮೀಪದಲ್ಲಿ ಸಂದೀಪ ಗಾಣಿಗ ನೂಜಿ ಮತ್ತು ಆದಿತ್ಯ ಶೆಟ್ಟಿ (28), ಬೇಳೂರು ಗ್ರಾಮ ಇವರು ಸೇರಿಕೊಂಡು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದಾಗಿ ತಿಳಿದುಬಂದಿತ್ತು. ಮಾಹಿತಿ ಆಧಾರವಾಗಿ ಪೊಲೀಸರು ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದರು.
ಈ ವೇಳೆ ಬಸ್ ನಿಲ್ದಾಣದ ಎದುರು ನಿಂತಿದ್ದ ವ್ಯಕ್ತಿಯೊಬ್ಬನು ಮೊಬೈಲ್ ಮೂಲಕ ಯಾರೊಂದಿಗೋ ಸಂಪರ್ಕದಲ್ಲಿದ್ದು, “KKR” ಮತ್ತು “SRH” ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ ಬಾಜಿ ಕಟ್ಟುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸರು ಹತ್ತಿರ ಹೋಗಿ ಪರಿಶೀಲಿಸಿದಾಗ ಆ ವ್ಯಕ್ತಿ ಆದಿತ್ಯ ಶೆಟ್ಟಿ ಎಂಬುದು ದೃಢಪಟ್ಟಿದೆ.
ಈ ಬೆಟ್ಟಿಂಗ್ ಚಟುವಟಿಕೆ ಈಡೇನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿದ್ದ IPL T20 ಪಂದ್ಯದಲ್ಲಿ ಕೊಲ್ಕತ್ತಾ Knight Riders (KKR) ಮತ್ತು Sunrisers Hyderabad (SRH) ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.





