ಬೈಂದೂರು: ಉಡುಪಿ ಜಿಲ್ಲೆಯ ನಾಗೂರಿನ ಮಹಾಲಸಾ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಹಾಕಿಸಿಕೊಂಡ ಬಳಿಕ ಅಸ್ವಸ್ಥಗೊಂಡ ಲಾರಿ ಚಾಲಕರೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ.
ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ನಿವಾಸಿ ಹಾಗೂ ಮಹಾಲಸಾ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಆಗಿರುವ ವೆಂಕಟೇಶ ಪಡಿಯಾರ (36) ನೀಡಿದ ಮಾಹಿತಿಯಂತೆ, ಮೇ 7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ RJ-09-GD-6986 ಸಂಖ್ಯೆಯ ಕಂಟೈನರ್ ಲಾರಿ ಬಂಕ್‌ಗೆ ಬಂದಿದ್ದು, ಚಾಲಕ ಡೀಸೆಲ್ ಹಾಕಿಸಿಕೊಂಡ ಬಳಿಕ ಕಾರ್ಡ್ ಸ್ವೈಪ್ ಮಾಡಿದ್ದಾನೆ.
ಅನಂತರ ಕುರ್ಚಿಯಿಂದ ಎದ್ದೇಳುವ ವೇಳೆ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಪ್ರಾಥಮಿಕ ಚಿಕಿತ್ಸೆ ನೀಡಿ 108 ಆಂಬ್ಯುಲೆನ್ಸ್ ಮೂಲಕ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಚಾಲಕ ಜಾಕೀರ್ ಹುಸೇನ್ (55), ಹರಿಯಾಣ ಮೂಲದವರು ಮೃತಪಟ್ಟಿರುವುದಾಗಿ ವೈದ್ಯರು ಮಧ್ಯಾಹ್ನ 1:20 ಗಂಟೆಗೆ ತಿಳಿಸಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.




