ಉಳ್ಳಾಲ: ಇಲ್ಲಿನ ಮೊಂಟೆಪದವು ಸಮೀಪ ಮಹಿಳೆ ಸಕಲೇಶಪುರ ಮೂಲದ ಸುಂದರಿ (38) ಅನ್ನು ಹತ್ಯೆ ನಡೆಸಿ ತೋಟವೊಂದರ ಬಾವಿಯಲ್ಲಿ ಸೊಂಟಕ್ಕೆ ಕಲ್ಲು ಕಟ್ಟಿ ಮೃತದೇಹವನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿ ಎರಡು ತಿಂಗಳ ಬಳಿಕ ಆರೋಪಿ ಬಿಹಾರ ಮೂಲದ ಫೈರೋಝ್ನನ್ನು ಎಸಿಪಿ ನೇತೃತ್ವದ ಪೊಲೀಸ್ ಮತ್ತು ಕೊಣಾಜೆ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೊಲೆ ಮಾಡಿದ ಬಳಿಕ ಮಹಿಳೆ ಬಳಿಯಿದ್ದ ಮೊಬೈಲನ್ನು ತನ್ನಲ್ಲಿ ಇಟ್ಟುಕೊಂಡಿದ್ದರಿಂದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಹಾಯವಾಗಿದೆ.
ಅತ್ಯಾಚಾರ ನಡೆಸಿ ಹತ್ಯೆಗೈದ ಆರೋಪಿಯ ಪತ್ತೆಗಾಗಿ ಪೊಲೀಸರು ತಂಡವನ್ನು ರಚನೆ ಮಾಡಿ ತನಿಖೆ ನಡೆಸುತ್ತಿದ್ದರು. ಈ ನಡುವೆ ಮೃತ ಸುಂದರಿ ಅವರ ಮೊಬೈಲ್ ನಾಪತ್ತೆಯಾಗಿದ್ದು, ಎರಡು ತಿಂಗಳ ಬಳಿಕ ಆಕೆಯ ಮೊಬೈಲ್ ಸ್ವಿಚ್ ಆನ್ ಆಗಿದ್ದರಿಂದ ಆರೋಪಿ ಇರುವ ಸ್ಥಳ ಪತ್ತೆಯಾಗಿತ್ತು. ಆರೋಪಿ ಮಂಗಳೂರು ಕಡೆ ವಾಪಸ್ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.
ಪಂಪ್ ವಿಚಾರದಲ್ಲಿ ಮನಸ್ತಾಪ ತೋಟದ ಬಾವಿಯ ಸಮೀಪವಿರುವ ಬಾವಿಗೆ ಪಂಪ್ ಹಾಕುವ ವಿಚಾರದಲ್ಲಿ ಅಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿರುವ ಸುಂದರಿ ಹಾಗೂ ಸ್ಥಳೀಯ ಮರದ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಫೈರೋಝ್ ನಡುವೆ ಗಲಾಟೆ ನಡೆದಿತ್ತು. ಅಲ್ಲಿ ಫೈರೋಝ್ ಸುಂದರಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಮೂರ್ಛೆ ತಪ್ಪಿ ಬಿದ್ದ ಸುಂದರಿಯನ್ನು ಆಕೆಯ ಬಾಡಿಗೆ ಮನೆಗೆ ಹೊತ್ತೂಯ್ದ ಆರೋಪಿ, ಅಲ್ಲೇ ಅತ್ಯಾಚಾರವೆಸಗಿದ್ದಾನೆ. ಆಬಳಿಕ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಹತ್ಯೆಗೈದು ಸಮೀಪದ ತೋಟದ ಬಾವಿಗೆ ಎಸೆದಿರುವ ವಿಚಾರಗಳು ಬೆಳಕಿಗೆ ಬಂದಿದೆ. ಆರೋಪಿ ಫೈರೋಝ್ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.