ಬೆಳ್ತಂಗಡಿ : ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸೇರಿ ಒಂದೇ ಮನೆಯ ಇಬ್ವರು ಚಲಿಸುತ್ತಿದ್ದ ಸರಕಾರಿ ಬಸ್ ನಿಂದ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ.
ಬೆಳಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಅಕ್ಕ ತಂಗಿ ಕೆಎಸ್ಆರ್ಟಿಸಿ ಬಸ್ ಹತ್ತಿದ್ದರು. ರೇಷ್ಮೆ ಕ್ರಾಸ್ ರೋಡ್ ಎಂಬಲ್ಲಿ ಪೆಟ್ರೊಲ್ ಪಂಪ್ ಎದುರು ಒಮ್ಮೆಲೆ ಬಸ್ ನ ಬಾಗಿಲು ತೆರೆದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್ ನ ಬಾಗಿಲು ಏಕಾಏಕಿ ತೆರೆದಿದ್ದರಿಂದ ಅಕ್ಕ ಕೆಳಗೆ ಬೀಳುತ್ತಿದ್ದಾಗ, ಆಕೆಯನ್ನು ರಕ್ಷಿಸಲು ತಂಗಿ ಮುಂದಾಗಿ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರ ಸಹಕಾರದಿಂದ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಮಾಹಿತಿ ಪ್ರಕಾರ ಓರ್ವ ವಿದ್ಯಾರ್ಥಿನಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದರೆ, ಮತ್ತೋರ್ವ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಮಕ್ಕಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿಕಿತ್ಸೆ ಬಳಿಕ ಸಹಾಯಕಿಯ ನೆರವಿನೊಂದಿಗೆ ಗಾಯಾಳು ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ಮಾಹಿತಿ ಲಭ್ಯವಾಗಿದೆ.
ವೇಗವಾಗಿ ಚಲಿಸುತ್ತಿರುವ ಬಸ್ಸಿನ ಬಾಗಿಲು ಏಕಾಏಕಿ ಓಪನ್ ಆಗಿ ಇಬ್ಬರು ಕೆಳಗೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.





