ಕಾಪು : ಸಾಲ ವಸೂಲಿಗೆ ತೆರಳಿದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕಾರನ್ನು ಧ್ವಂಸಗೊಳಿಸಿದ ಘಟನೆ ಕಾಪು ತಾಲೂಕಿನ ನಡಿಕೆರೆ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಚ್ಕಲ್ ಮಲ್ಲಾರ ಗ್ರಾಮದ ನಿವಾಸಿ ಮೊಹಮ್ಮದ್ ಅಬ್ದುಲ್ ಅಝೀಝ್ (30) ಅವರು ತಮ್ಮ ಸ್ನೇಹಿತ ಸಾತಿಕ್ ಎಂಬಾತನಿಗೆ ₹75,000 ಸಾಲವಾಗಿ ನೀಡಿದ್ದರು.
ಇದೇ ಹಣವನ್ನು ವಾಪಸು ಪಡೆಯಲು ಏಪ್ರಿಲ್ 20ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದಾಗ, ನಡಿಕೆರೆ ಪ್ರದೇಶದ ಸಚಿನ್ ಶೆಟ್ಟಿ ಅವರ ಮನೆ ಬಳಿ ಬರಲು ಸೂಚಿಸಲಾಗಿದೆ.
ಅಬ್ದುಲ್ ಅಝೀಝ್ ಅವರು ತಮ್ಮ ಸ್ನೇಹಿತ ವರುಣನ ಕಾರು (KA 20 MH 0478)ದಲ್ಲಿ ಮಧ್ಯಾಹ್ನ 2:15ರ ಸುಮಾರಿಗೆ ಸ್ಥಳಕ್ಕೆ ತೆರಳಿದರು.
ಕಾರನ್ನು ಸಚಿನ್ ಶೆಟ್ಟಿ ಮನೆಯ ಸಮೀಪದ ಕಾಂಕ್ರೀಟ್ ರಸ್ತೆಯಲ್ಲಿ ನಿಲ್ಲಿಸಿದ ತಕ್ಷಣ, ಸಚಿನ್ ಶೆಟ್ಟಿ ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ದಾಳಿಯಲ್ಲಿ ಕಾರಿನ ಮುಂಭಾಗದ ಗಾಜು, ಹಿಂಭಾಗದ ಗಾಜು, ಬಾಗಿಲುಗಳು ಸೇರಿದಂತೆ ಹಲವು ಭಾಗಗಳು ಜಖಂ ಆಗಿದ್ದು, ಅಂದಾಜು ₹30,000 ನಷ್ಟ ಉಂಟಾಗಿದೆ. ಇದೇ ವೇಳೆ, ಕಾರಿನಿಂದ ಇಳಿಯುತ್ತಿದ್ದ ಅಬ್ದುಲ್ ಅಝೀಝ್ ಅವರ ಎಡಕಾಲಿನ ತೊಡೆಗೆ ರಾಡಿನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ನಡೆಸಿದ ಆರೋಪಿಯು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.





