Home Crime ಕಾರ್ಕಳ: ಹೆಂಡತಿ ಬಳಿ ಹಣ ಕೇಳಿದ ಗಂಡನಿಗೆ ಬಾಮೈದ, ಪತ್ನಿಯಿಂದಲೇ ಹಲ್ಲೆ

ಕಾರ್ಕಳ: ಹೆಂಡತಿ ಬಳಿ ಹಣ ಕೇಳಿದ ಗಂಡನಿಗೆ ಬಾಮೈದ, ಪತ್ನಿಯಿಂದಲೇ ಹಲ್ಲೆ

ಕಾರ್ಕಳ : ಹೆಂಡತಿಯ ಬಳಿ ಹಣ ಕೇಳಲು ಹೋದ ಪತಿಯ ಮೇಲೆ ಪತ್ನಿ ಹಾಗೂ ಬಾಮೈದ ಸೇರಿ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಮಣಿ (28) ಎಂಬುವವರು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದ ಮಂಜೆರಾಯ್ ನಿವಾಸಿ ಮಣಿ ಎಂಬುವವರು ಮಾರ್ಚ್ 30ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ತನ್ನ ಹೆಂಡತಿ ಆಶಾ ಇರುವ ಸ್ಥಳಕ್ಕೆ ತೆರಳಿದ್ದರು. ಆಶಾ ತನ್ನ ತಮ್ಮ ನವೀನ್ ಅವರ ಮನೆಯಲ್ಲಿದ್ದರು. ಈ ವೇಳೆ ಮಣಿ ಅವರು ತನ್ನ ಹೆಂಡತಿಯ ಬಳಿ ಹಣ ಕೇಳಲು ಹೋದಾಗ ಗಲಾಟೆ ಆರಂಭವಾಗಿದೆ.

ತನ್ನ ಮನೆಗೆ ಬಂದ ಮಣಿಯನ್ನು ಕಂಡು ಸಿಟ್ಟಾದ ಬಾಮೈದ ನವೀನ್, “ನೀನು ನನ್ನ ಮನೆಗೆ ಬರಬೇಡ” ಎಂದು ಅವಾಚ್ಯವಾಗಿ ಬೈದಿದ್ದಾನೆ. ಅಷ್ಟಕ್ಕೆ ನಿಲ್ಲಿಸದೆ ಮಣಿಯ ಕೆನ್ನೆಗೆ ಹೊಡೆದಿದ್ದಲ್ಲದೆ, ಬಾಯಿಂದ ಮಣಿಯ ಬಲಕೈ ಮತ್ತು ಬೆನ್ನಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದಾನೆ.

ಇದೇ ಸಂದರ್ಭದಲ್ಲಿ ಮಣಿಯ ಹೆಂಡತಿ ಆಶಾ ಕೂಡಾ ಸೇರಿಕೊಂಡು, “ನನ್ನ ತಮ್ಮನಿಗೆ ಹೊಡೆಯುತ್ತೀಯಾ?” ಎಂದು ಕೂಗಾಡಿ ಕೋಲಿನಿಂದ ಪತಿ ಮಣಿಯ ಮೈಕೈ ಹಾಗೂ ತಲೆಗೆ ಬಲವಾಗಿ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮಣಿ ಅವರನ್ನು ತಕ್ಷಣವೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸದ್ಯ ಹಲ್ಲೆಗೊಳಗಾದ ಮಣಿ ಅವರು ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ನವೀನ್ ಮತ್ತು ಆಶಾ ವಿರುದ್ಧ ಕ್ರಮ ಕೈಗೊಂಡಿದ್ದಾರೆ.