Home Crime ಅಂಗಡಿ ಕೆಲಸಕ್ಕಿದ್ದ ದಂಪತಿಯಿಂದ ಕಳವು : ಮೂರು ತಿಂಗಳ ಬಳಿಕ ದೂರು…!!

ಅಂಗಡಿ ಕೆಲಸಕ್ಕಿದ್ದ ದಂಪತಿಯಿಂದ ಕಳವು : ಮೂರು ತಿಂಗಳ ಬಳಿಕ ದೂರು…!!

ಸುಳ್ಯ: ಸುಳ್ಯದ ಮಾಂಸದ ಅಂಗಡಿಯಲ್ಲಿ ಕೆಲಸಕ್ಕಿದ್ದ ದಂಪತಿ ನಗದು ಹಾಗೂ ದ್ವಿಚಕ್ರ ವಾಹನ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಮೂರು ತಿಂಗಳ ಬಳಿಕ ದೂರು ದಾಖಲಿಸಲಾಗಿದೆ.

ನಂಜನಗೂಡಿನ ಉಳ್ಳಲ್ಲಿಯ ಮಂಜು (40) ಮತ್ತು ಆತನ ಪತ್ನಿ ಗೀತಾ (45) ಆರೋಪಿಗಳು.

ಸುಳ್ಯದ ಶ್ರೀರಾಂಪೇಟೆ ಮತ್ತು ವಿಷ್ಣು ಸರ್ಕಲ್‌ ಬಳಿ ಹಂದಿ ಮಾಂಸ ಮಾರಾಟದ ಅಂಗಡಿಗಳನ್ನು ಹೊಂದಿದ್ದ ಮೂಲತಃ ನಂಜನಗೂಡಿನ ವೆಂಕಟೇಶ್‌ ಅವರು ಅಂಗಡಿಗಳನ್ನು ನೋಡಿಕೊಳ್ಳಲು ದೂರದ ಸಂಬಂಧಿಗಳಾದ ಈ ದಂಪತಿಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರು ಐವರ್ನಾಡಿನಲ್ಲಿ ವಾಸ್ತವ್ಯ ಇದ್ದರು.

ಎ. 12ರಂದು ಮಾಲಕರು ಬೆಳಗ್ಗೆ ಶ್ರೀರಾಂಪೇಟೆಯ ಅಂಗಡಿಗೆ 1 ಕ್ವಿಂಟಾಲ್‌ ಹಂದಿ ಮಾಂಸ ಹಾಕಿ ಮನೆಗೆ ಹೋಗಿದ್ದು, ಆ ವೇಳೆ ಅಂಗಡಿಯಲ್ಲಿ ಮಂಜು ಹಾಗೂ ಗೀತಾ ಇದ್ದರು. ಸಂಜೆ ಬಂದು ನೋಡಿದಾಗ ದಂಪತಿ ಅಲ್ಲಿರಲಿಲ್ಲ. ಅಂಗಡಿಯಲ್ಲಿದ್ದ ಮಾಂಸ ಪೂರ್ತಿ ಖಾಲಿಯಾಗಿದ್ದು, ಕ್ಯಾಶ್‌ ಕೌಂಟರ್‌ನಲ್ಲಿ ಇದ್ದ ಸುಮಾರು 20 ಸಾವಿರ ರೂ. ಹಾಗೂ 80 ಸಾವಿರ ರೂ. ಮೌಲ್ಯದ ಸ್ಕೂಟರ್‌ ಕಳವಾಗಿರುವುದು ತಿಳಿದು ಬಂತು. ದಂಪತಿ ಸುಳ್ಯಕ್ಕೆ ವಾಪಸು ಬರಬಹುದೆಂದು ಭಾವಿಸಿ ಪೊಲೀಸ್‌ ದೂರು ನೀಡಿರಲಿಲ್ಲ.

ಆದರೆ ಮೂರು ತಿಂಗಳಾದರೂ ಮಂಜು ಮತ್ತು ಆತನ ಪತ್ನಿ ಗೀತಾ ಬಾರದೆ ಇರುವುದರಿಂದ ಮಾಲಕರು ಜು. 13ರಂದು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.